ಶಕುಂತಳಾ ಶೆಟ್ಟಿಯವರಿಗೆ ಕಚೇರಿ ಸೌಲಭ್ಯ

Update: 2016-11-02 12:29 GMT

ಪುತ್ತೂರು, ನ.2: ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಇದೀಗ ಸರಕಾರವು ಬೆಂಗಳೂರಿನಲ್ಲಿ ಸ್ವಂತ ಕಚೇರಿಯನ್ನು ನೀಡಿದ್ದು, ಬುಧವಾರ ನೂತನ ಕಚೇರಿಯಲ್ಲಿ ಕಾರ್ಯ ನಿರ್ವಹಣೆ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ವರ್ಷದ ಬಳಿಕ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಕಚೇರಿ ಸೌಲಭ್ಯ ಲಭಿಸಿದೆ.

ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಹೊಂದಿರುವ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು 2015ರ ನವೆಂಬರ್ 4ರಂದು ಪ್ರಕಟಿಸಲಾಗಿತ್ತು. ರಾಜ್ಯದ ಒಟ್ಟು ಹತ್ತು ಶಾಸಕರಿಗೆ ಈ ಸೌಲಭ್ಯ ಸಿಕ್ಕಿತ್ತು. ಶಕುಂತಳಾ ಶೆಟ್ಟಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಣೆ ನೀಡಲಾಗಿತ್ತು. ಹುದ್ದೆ ಸಿಕ್ಕಿದ ಬಳಿಕ ಕೆಂಪು ಗೂಟದ ಕಾರು ಸಿಕ್ಕಿದ್ದರೂ ಸ್ವಂತ ಕಚೇರಿ ಮಾತ್ರ ಬೆಂಗಳೂರಿನಲ್ಲಿ ಸಿಕ್ಕಿರಲಿಲ್ಲ. ಶಾಸಕರು ಬೆಂಗಳೂರಿಗೆ ಹೋದಾಗಲೆಲ್ಲ ಶಾಸಕರ ಭವನಕ್ಕೆ ತೆರಳುತ್ತಿದ್ದರು. ಇಲಾಖೆಯಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಬರುತ್ತಿದ್ದರು.

ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇರುವ ಕನ್ನಡ ಭವನದಲ್ಲಿ ಹೊಸ ಕಚೇರಿ ನೀಡಲಾಗಿದೆ. ಬುಧವಾರ ಶಾಸಕರು ಕಚೇರಿಗೆ ಪ್ರವೇಶಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಚಿವ ಸ್ಥಾನಕ್ಕೆ ಸಮಾನವಾಗಿರುವ ಹುದ್ದೆಯಾಗಿರುವ ಕಾರಣ ಕಚೇರಿಯ ಆವಶ್ಯಕತೆ ಇತ್ತು. ಇನ್ನಿತರ ಸಂಸದೀಯ ಕಾರ್ಯದರ್ಶಿಗಳಿಗೆ ಕಚೇರಿ ಸಿಕ್ಕಿದ್ದು, ನನಗೆ ಸಿಗದಿದ್ದರೂ ನಾನೇನು ಆ ವಿಚಾರದಲ್ಲಿ ತಕರಾರು ತೆಗೆದಿರಲಿಲ್ಲ. ಇದೀಗ ಸರಕಾರ ತಾನಾಗಿಯೇ ನೀಡಿದೆ. ಖುಷಿಯಿಂದ ಸ್ವೀಕರಿಸಿದ್ದೇನೆ ಎಂದು ಶಕುಂತಳಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News