ಮಂಜೇಶ್ವರ: ವಿದೇಶಕ್ಕೆ ಗಾಂಜಾ ಸಾಗಿಸಲು ಯತ್ನಿಸಿದ ಇಬ್ಬರ ಬಂಧನ

Update: 2016-11-02 13:10 GMT

ಮಂಜೇಶ್ವರ, ನ.2: ಗಲ್ಫ್‌ಗೆ ತೆರಳುತ್ತಿದ್ದ ಯುವಕನ ಮೂಲಕ ವಿದೇಶಕ್ಕೆ ಗಾಂಜಾ ಸಾಗಿಸಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉಪ್ಪಳ ಬಪ್ಪಾಯಿ ತೊಟ್ಟಿ ಸಫೀದ ಮಂಝಿನ ಮುಹಮ್ಮದ್ ಅಶ್ರಫ್ ಎ.ಬಿ. ಯಾನೆ ಅಸ್ರು(29), ಉಪ್ಪಳ ಮಣಿಮುಂಡ ನಿವಾಸಿ ಅನ್ವರ್ ಅಹ್ಮದ್ ಯಾನೆ ಬಾಯಿಜಾನ್(58) ಬಂಧಿತ ಆರೋಪಿಗಳು.

ಅ.30ರಂದು ಚೌಕಿ ಕಂಬಾರ್ ನಿವಾಸಿ ಯುವಕನೋರ್ವ ಗಲ್ಫ್‌ಗೆ ತೆರಳಲು ನಿರ್ಧರಿಸಿದ್ದರು. ಇದನ್ನರಿತ ಆರೋಪಿಗಳು ಆ ಯುವಕನ ಸಂಬಂಧಿಕನಾದ ಕುಂಬಳೆಯ ಮೊಬೈಲ್ ಅಂಗಡಿಯ ನೌಕರನ ಮೂಲಕ ಪಾರ್ಸೆಲ್‌ವೊಂದನ್ನು ನೀಡಿ ಅದನ್ನು ಗಲ್ಫ್‌ನಲ್ಲಿರುವ ಸ್ನೇಹಿತನಿಗೆ ನೀಡುವಂತೆ ತಿಳಿಸಿದ್ದರು. ಅದನ್ನು  ಪಡೆದುಕೊಂಡ ಯುವಕ ಸಂಶಯದ ಮೇರೆಗೆ ತೆರೆದು ನೋಡಿದಾಗ ಅದರಲ್ಲಿ ರಸ್ಕ್ ಪ್ಯಾಕೆಟ್‌ನ ಮಧ್ಯೆ ಗಾಂಜಾದ ಪ್ಯಾಕ್‌ನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

ಬಳಿಕ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಕುಂಬಳೆ ಎಸ್ಸೈ ಮೆಲ್ವಿನ್ ಜೋಸ್ ಹಾಗೂ ಎಎಸ್ಸೈ ಬಾಬು ಥೋಮಸ್ ನೇತೃತ್ವದ ಪೊಲೀಸರು ಪಾರ್ಸೆಲ್‌ನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಪ್ಯಾಕೆಟ್‌ನಲ್ಲಿ 380 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದರಂತೆ ಗಾಂಜಾ ಗಲ್ಫ್‌ಗೆ ಕೊಟ್ಟು ಕಳುಹಿಸಲೆತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News