ಉದ್ಯೋಗ-ಕಾರ್ಮಿಕ ಬಲಗಳ ವಾರ್ಷಿಕ ಸಮೀಕ್ಷೆಗೆ ಕೇಂದ್ರ ಸರಕಾರದ ಪ್ರಸ್ತಾವ
ಹೈದರಾಬಾದ್, ನ.2: ದೇಶಾದ್ಯಂತದ ಕಾರ್ಮಿಕರು, ನೌಕರರು ಹಾಗೂ ನಿರುದ್ಯೋಗದ ಪ್ರಮಾಣವನ್ನು ಅಂದಾಜಿಸಲು ಅನುಕೂಲವಾಗುವಂತೆ ವಾರ್ಷಿಕ ಸಮೀಕ್ಷೆಗಳ ಪ್ರಸ್ತಾವಗಳೊಂದಿಗೆ ಸರಕಾರ ಮುಂದೆ ಬಂದಿದೆಯೆಂದು ಭಾರತದ ಮುಖ್ಯ ಅಂಕಿ-ಅಂಶ ಅಧಿಕಾರಿ ಟಿ.ಸಿ.ಅನಂತ್ ತಿಳಿಸಿದ್ದಾರೆ.
ಉದ್ಯೋಗ ಹಾಗೂ ಕಾರ್ಮಿಕ ಬಲದ ನಿಯಮಿತ ಸಮೀಕ್ಷೆ ನಡೆಸುವ ರಾಷ್ಟ್ರೀಯ ಮಾದರಿ ಸಮೀಕ್ಷೆಯ (ಎನ್‌ಎಸ್‌ಎಸ್) ಯೋಜನೆಯು ಮುನ್ನಡೆಯ ಹಂತದಲ್ಲಿದೆ. ಈ ಯೋಜನೆಯನ್ವಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಂಕಿ-ಅಂಶಗಳಲ್ಲಿ ಪ್ರತ್ಯೇಕ ವಿಭಜನೆಯಿರುತ್ತದೆಂದು ಅವರಿಂದು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಇದು ನಮಗೆ ನಿಯಮಿತವಾಗಿ (ವಾರ್ಷಿಕ) ಕಾರ್ಮಿಕ ಬಲ, ನೌಕರ ಬಲ ಹಾಗೂ ನಿರುದ್ಯೋಗದ ಪ್ರಮಾಣವನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಪ್ರತ್ಯೇಕವಾದ, ಆದರೆ, ಅಖಿಲ ಭಾರತ ಮಟ್ಟದಲ್ಲಿ ಅಂದಾಜು ನೀಡುತ್ತದೆಯೆಂದು ಅನಂತ್ ಹೇಳಿದ್ದಾರೆ.
ಇದಲ್ಲದೆ, ನಗರ ಪ್ರದೇಶಗಳ ಮುಖ್ಯ ಸೂಚಿಗಳ ಬದಲಾವಣೆಗಳನ್ನು ನೋಡಲು ತ್ರೈಮಾಸಿಕ ಮಾಹಿತಿಯೂ ಲಭ್ಯವಾಗಲಿದೆಯೆಂದು ಅವರು ತಿಳಿಸಿದ್ದಾರೆ.
ಈ ನಿಯತ ಕಾಲಿಕ ಸರಣಿಯು ಆರ್ಥಿಕ ನೀತಿಯ ಚರ್ಚೆಗೆ ಮಹತ್ವದ ಹಿಮ್ಮಾಹಿತಿ ಒದಗಿಸುವುದೆಂದು ನಿರೀಕ್ಷಿಸಲಾಗಿದೆ. ಇದು ಕೇಂದ್ರೀಯ ಅಂಕಿ-ಅಂಶ ಕಚೇರಿಗೆ (ಸಿಎಸ್‌ಒ) ಅಂಕಿ-ಅಂಶದ ಗಮನಾರ್ಹ ಹೊಸ ಮೂಲವಾಗಲಿದೆಯೆಂದು ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಕಾರ್ಯದರ್ಶಿಯೂ ಆಗಿರುವ ಅನಂತ್ ಹೇಳೀದ್ದಾರೆ.
ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಸಾಮಗ್ರಿಗಳು ಹಾಗೂ ಸೇವೆಗಳಿಗೆ ಉತ್ಪಾದನೆ-ಬಳಕೆ ವೃತ್ತದ ವಿವಿಧ ಸ್ಥಳಗಳಲ್ಲಿ ಹೇರಲಾಗಿರುವ ಹಲವು ರೀತಿಯ ತೆರಿಗೆಗಳನ್ನು ಸಂಗ್ರಹಿಸುತ್ತಿವೆ. ಜಿಎಸ್‌ಟಿಯ ಸಂರಚನೆಯು ಒಂದೇ ಸ್ಥಳದಲ್ಲಿ ತೆರಿಗೆ ಸಂಗ್ರಹಕ್ಕೆ ಅನುವು ಮಾಡಿಕೊಡಲಿದ್ದು, ನಡುವಿನ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ದಾಖಲಿಸಲಾಗಿದೆ. ಇದು ಅಂಕಿ-ಅಂಶ ಕಚೇರಿಗೆ ಆರ್ಥಿಕತೆಯ ವ್ಯವಹಾರ ಸ್ವರೂಪದ ಸಂಪೂರ್ಣ ಚಿತ್ರಣವನ್ನು ಪಡೆಯಲು ಸಹಾಯ ಮಾಡಲಿದೆ. ಈ ಸಂರಚನೆ ಜಾರಿಯಾದಾಗ ಹಾಗೂ ಮಾಹಿತಿಯ ಹರಿಯುವಿಕೆ ಸ್ಥಿರಗೊಂಡಾಗ ನಾವು ದೇಶದ ಆರ್ಥಿಕ ಚಟುವಟಿಕೆಗಳ ಬಗ್ಗೆ ಇನ್ನಷ್ಟು ಸಮೃದ್ಧ ಅಂಕಿ-ಅಂಶಗಳನ್ನು ಪಡೆಯಬೇಕಾದ ಸಂಭವವಿರುತ್ತದೆಂದು ಅವರು ತಿಳಿಸಿದ್ದಾರೆ.