ಉಡುಪಿ: ಸಚಿವರಿಂದ 12.66 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ

Update: 2016-11-02 13:07 GMT

ಬ್ರಹ್ಮಾವರ, ನ.2: ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 12.66 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ರಸ್ತೆ ಹಾಗೂ ಸೇತುವೆ ಗಳನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಮೋದ್ ಮಧ್ವರಾಜ್ ಬುಧವಾರ ಉದ್ಘಾಟಿಸಿದರು.

3.05 ಕೋಟಿ ರೂ. ವೆಚ್ಚದ ಕುಂಜಾಲು -ಹಾಳೆಕಟ್ಟೆ ಅಡ್ಜೀಲು ರಸ್ತೆ ಮತ್ತು ಸೇತುವೆ, 3.71 ಕೋಟಿ ರೂ.ವೆಚ್ಚದ ಕಂಜೂರು ಕಕ್ಕುಂಜೆಬೈಲು- ಮರಾಠಿ ಕಾಲನಿ ರಸ್ತೆ ಮತ್ತು ಸೇತುವೆ, 2.62 ಕೋಟಿ ರೂ.ವೆಚ್ಚದ ಕೊಕ್ಕರ್ಣೆ-ಮದ್ದೂರು ರಸ್ತೆ ಕಾಮಗಾರಿ, 1.92 ಕೋಟಿ ರೂ.ವೆಚ್ಚದಲ್ಲಿ ಕೊಕ್ಕರ್ಣೆ- ಹೊರ್ಲಾಳಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ, ಆಮ್ರಕಲ್ಲು ನಂಚಾರಿನಲ್ಲಿ 143.72 ಲಕ್ಷ ರೂ. ವೆಚ್ಚದ ಕಾಮಗಾರಿ ಸೇರಿದಂತೆ ಒಟ್ಟು 12.66 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್, ನಗರಗಳು ಅಭಿವೃದ್ದಿಯಾದರೆ ಮಾತ್ರ ಅಭಿವೃದ್ಧಿಯಲ್ಲ, ಗ್ರಾಮಗಳೂ ಸಹ ನಗರಗಳಂತೆ ಅಭಿವೃದ್ಧಿ ಗೊಳ್ಳಬೇಕು ಎಂಬುದು ತಮ್ಮ ಗುರಿಯಾಗಿದೆ ಎಂದರು.

ಉಡುಪಿ ವಿಧಾನಸಬಾ ಕ್ಷೇತ್ರದಲ್ಲಿ 3ನೇ ಹಂತದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 17.62 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ರಸ್ತೆ ಹಾಗೂ ಸೇತುವೆಗಳನ್ನು ನಿರ್ಮಿಸಲಾಗಿದೆ. 4ನೇ ಹಂತದಲ್ಲಿ 11 ಕಾಮಗಾರಿಗಳಲ್ಲಿ 70.97ಕಿ.ಮೀ. ಉದ್ದದ ರಸ್ತೆ ಹಾಗೂ 3 ಸೇತುವೆಗಳಿಗೆ ಒಟ್ಟು 21 ಕೋಟಿ ರೂ. ಬಿಡುಗಡೆಯಾಗಲಿದೆ. ಕಳೆದ 3 ವರ್ಷಗಳ ಅವಧಿ ಯಲ್ಲಿ ಇದುವರೆವಿಗೂ 43 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಬಳಸಲಾಗಿದೆ ಎಂದರು.

ತಾವು ಶಾಸಕರಾದ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ 4 ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಭರವಸೆ ನೀಡಲಾಗಿತ್ತು. ಇದರಲ್ಲಿ 9 ಕೋಟಿ ರೂ. ವೆಚ್ಚದ ನೀಲಾವರ-ಕೋರಾಡಿ ಸೇತುವೆ, 13.5 ಕೋಟಿ ರೂ. ವೆಚ್ಚದ ಮಲ್ಪೆ-ಪಡುಕೆರೆ ಸೇತುವೆ, 10 ಕೋಟಿ ರೂ. ವೆಚ್ಚದ ಉಪ್ಪೂರು-ಪೆರಂಪಳ್ಳಿ ಸೇತುವೆ ಕಾಮಗಾರಿ ಗಳು ಈಗಾಗಲೇ ಪ್ರಾರಂಭವಾಗಿದ್ದು, ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾದ ಹೊರ್ಲಾಳಿ ಶೀರೂರು- ಮುದ್ದುಮನೆ ಸೇತುವೆಯನ್ನು 13 ಕೋಟಿ ವೆಚ್ಚದಲ್ಲಿ ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.

ಅಲ್ಲದೇ ಈ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸರಕಾರಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ತಮ್ಮ ಅಧಿಕಾರವಧಿಯಲ್ಲಿ ಇದುವರೆವಿಗೂ 600ರಿಂದ 700 ಕೋಟಿ ರೂ.ಗಳನ್ನು ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ ಎಂದರು.

94ಸಿ ಹಾಗೂ ಅಕ್ರಮ ಸಕ್ರಮ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದ ಪ್ರಮೋದ್, ಡಿಸೆಂಬರ್ ತಿಂಗಳಿನಿಂದ ಉಡುಪಿ ವಿಧಾನಸಭಾ ವ್ಯಾಪ್ತಿಯ ಒಟ್ಟು 65 ಗ್ರಾಮಗಳಲ್ಲಿ ಪ್ರತಿ ವಾರ ಒಂದು ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಲು ಉದ್ದೇಶಿಸ ಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯೆ ಡಾ. ಸುನೀತಾ ಶೆಟ್ಟಿ, ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷೆ ದೇವಕಿ ಕೋಟ್ಯಾನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗ್ರಾಪಂ ಸದಸ್ಯರಾದ ರಾಜೀವ ಶೆಟ್ಟಿ, ಶೋಭಾ, ವಿಜಯಲಕ್ಷ್ಮಿ, ಕುಮಾರ್, ವಸಂತ ನಾಯಕ್ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೆಟ್ಟಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News