ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಡಿಎನ್‌ಎ ವರದಿ ಆಧಾರದಲ್ಲಿ ಆರೋಪ ಸಾಬೀತು

Update: 2016-11-02 15:18 GMT

ಉಡುಪಿ, ನ.2: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ನದಿಯಲ್ಲಿ ಪತ್ತೆಯಾದ ಕೆಲವು ಮೂಳೆಗಳನ್ನು ಡಿಎನ್‌ಎ ಅನಾಲಿಸಿಸ್‌ಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ಮತ್ತು ತನಿಖೆಯ ಸಂದರ್ಭ ಸಂಗ್ರಹಿಸಲಾದ ಸಾಕ್ಷಾಧಾರಗಳ ಆಧಾರದ ಮೇಲೆ ಆರೋಪ ಸಾಬೀತಾಗಿರುವುದರಿಂದ ಪ್ರಕರಣದ ಐದು ಮಂದಿ ಆರೋಪಿಗಳ ವಿರುದ್ಧದ ಪ್ರಕರಣ ದಾಖಲಿಸಿ ಪ್ರಾಥಮಿಕ ಹಂತದ ದೋಷಾರೋಪಣಾ ಪಟ್ಟಿಯನ್ನು ಉಡುಪಿ ನ್ಯಾಯಾಲಯಕ್ಕೆ ಇಂದು ಸಲ್ಲಿಸಲಾಗಿದೆ ಎಂದು ಸಿಐಡಿ ಪೊಲೀಸ್ ಅಧೀಕ್ಷಕ ಏಡಾ ಮಾರ್ಟಿನ್ ಮಾರ್ಬನಿಂಗ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಭಾಸ್ಕರ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ(50), ಪುತ್ರ ನವನೀತ್ ಶೆಟ್ಟಿ(20), ನಿರಂಜನ್ ಭಟ್ (26) ಹಾಗೂ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್(56),ರಾಘವೇಂದ್ರ(26) ಎಂಬವರ ವಿರುದ್ಧ ನಾಲ್ಕು ಸಂಪುಟಗಳಲ್ಲಿ ಒಟ್ಟು 1,300 ಪುಟಗಳ ಆರೋಪಪಟ್ಟಿಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣಂ ಮುಂದೆ ಸಲ್ಲಿಸಿ, ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪ್ರಥಮ ಬಾರಿಗೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತ ವಿವರಗಳನ್ನು ನೀಡಿದರು.

ಈ ಪ್ರಕರಣವನ್ನು ಬೇಧಿಸುವಲ್ಲಿ ಸಿಐಡಿ ತನಿಖಾ ತಂಡದ ಮುಂದೆ ಅನೇಕ ಸವಾಲುಗಳಿದ್ದವು. ಮಣಿಪಾಲ ಪೊಲೀಸರು ಆರೋಪಿಗಳನ್ನು ಆರಂಭದಲ್ಲಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ಕಾರಣ ಮತ್ತೆ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ತೆಗೆದುಕೊಳ್ಳಲು ಕಾನೂನಿನ ಅಡಚಣೆಗಳು ಎದುರಾದವು. ಸಾಕ್ಷ ಗಳನ್ನು ಸಂಗ್ರಹಿಸಲು ಮುಂಗಾರು ಮಳೆಯ ಕಾರಣ ನದಿಯಲ್ಲಿ ಎಸೆದಿದ್ದ ಮೂಳೆ ಹಾಗೂ ಹೋಮಕ್ಕೆ ಬಳಸಿದ ಕಲ್ಲುಗಳನ್ನು ಜಪ್ತಿ ಮಾಡಲು ಹರ ಸಾಹಸ ಪಡೆಬೇಕಾಯಿತು. ಈ ಎಲ್ಲ ಅಡಚಣೆಗಳನ್ನು ದಾಟಿ ಪ್ರಕರಣವನ್ನು ಬೇಧಿಸುವಲ್ಲಿ ಸಿಐಡಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಕೃತ್ಯ ಎಸಗಿದ ರೀತಿ

ತನಿಖೆ ಸಮಯದಲ್ಲಿ ದೊರತೆ ಮಾಹಿತಿ ಪ್ರಕಾರ, ರಾಜೇಶ್ವರಿ ಶೆಟ್ಟಿ, ನಿರಂಜನ ಭಟ್ ಮತ್ತು ನವನೀತ್ ಶೆಟ್ಟಿ ಅವರು ಆಸ್ತಿ ಹಾಗೂ ಅನೈತಿಕ ಸಂಬಂಧದ ವಿಚಾರದಲ್ಲಿನ ಧ್ವೇಷದಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಜು.28ರಂದು ಅಪರಾಹ್ನ ಮೂರು ಗಂಟೆಗೆ ದುರ್ಗಾ ಇಂಟರ್ ನ್ಯಾಶನಲ್ ಹೊಟೇಲ್‌ನಿಂದ ಮನೆಗೆ ಬಂದ ಭಾಸ್ಕರ್ ಶೆಟ್ಟಿ ಸ್ನಾನ ಮಾಡಿ ಬಾತ್‌ರೂಮಿ ನಿಂದ ಹೊರಗೆ ಬರುತ್ತಿದ್ದಾಗ ಈ ಮೂವರು ಆರೋಪಿಗಳು ಭಾಸ್ಕರ್ ಶೆಟ್ಟಿಯ ಮುಖದ ಮೇಲೆ ಪೆಪ್ಪರ್ ಸ್ಪ್ರೆ ಹಾಕಿ ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಹೊಡೆದು ನಂತರ ಕೀಟ ನಾಶಕ ಔಷಧವನ್ನು ಕುಡಿಸಿ ಅವರ ಪ್ರಜ್ಞೆ ತಪ್ಪುವಂತೆ ಮಾಡಿದ್ದರು.

ಬಳಿಕ ಕಾರಿನ ಡಿಕ್ಕಿಯಲ್ಲಿ ಅವರನ್ನು ಹಾಕಿ ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಗೆ ತೆಗೆದುಕೊಂಡು ಬಂದರು. ಅಲ್ಲಿ ಯಾಗ ಶಾಲೆಗೆ ತೆಗೆದು ಕೊಂಡು ಹೋಗಿ ನಂತರ ಕಲ್ಲುಗಳಿಂದ ಹೋಮ ಕುಂಡ ರಚಿಸಿ ಆ ಕುಂಡ ದಲ್ಲಿ ಭಾಸ್ಕರ್ ಶೆಟ್ಟಿಯ ದೇಹವನ್ನು ಇಟ್ಟು ಕರ್ಪೂರ, ತುಪ್ಪ, ಪೆಟ್ರೋಲ್ ನಿಂದ ಸುಟ್ಟರು. ಮುಂದೆ ಎಲ್ಲ ಸಾಕ್ಷಾಧಾರಗಳನ್ನು ನಾಶ ಮಾಡುವುದಕ್ಕಾಗಿ ನಿರಂಜನ ಭಟ್ ಹಾಗೂ ಆತನ ಕಾರು ಚಾಲಕ ರಾಘವೇಂದ್ರ ಯಾಗ ಶಾಲೆಯನ್ನು ನೀರಿನಿಂದ ತೊಳೆದು ಮೂಳೆಗಳನ್ನು ಹಾಗೂ ಹೋಮಕ್ಕೆ ಉಪ ಯೋಗಿಸಿದ ಕಲ್ಲುಗಳನ್ನು ನದಿಯಲ್ಲಿ ಎಸೆದಿದ್ದರು. ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಸುಟ್ಟ ಜಾಗದ ಟೈಲ್ಸ್‌ಗಳನ್ನು ತೆಗೆದು ಹೊಸ ಟೈಲ್ಸ್ ಗಳನ್ನು ಹಾಕಿದ್ದರು ಎಂದು ಸಿಐಡಿ ಎಸ್ಪಿ ಮಾರ್ಟಿನ್ ತಿಳಿಸಿದರು.

ತನಿಖೆ ಮುಂದುವರಿಕೆ

ಆರೋಪಿಗಳ ಬಂಧನದ ನಂತರ 90 ದಿನ ಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು. ಹಾಗಾಗಿ ನಾವು ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದ್ದೇವೆ. ಇನ್ನು ಕೂಡ ನಮ್ಮ ತನಿಖೆ ಮುಂದುವರಿಯಲಿದೆ. ಅದು ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಹೇಳಲು ಆಗಲ್ಲ. ತನಿಖೆ ಪೂರ್ಣಗೊಂಡ ನಂತರ ಅಂತಿಮ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಇದು ತೀರಾ ಸಂಕೀರ್ಣವಾದ ಪ್ರಕರಣವಾಗಿರುವುದರಿಂದ ಈ ಬಗ್ಗೆ ಎಲ್ಲ ಮಾಹಿತಿ ಹೇಳಲು ಆಗಲ್ಲ. ಆದಷ್ಟು ಬೇಗ ತನಿಖೆ ಪೂರ್ಣ ಗೊಳಿಸುತ್ತೇವೆ. ಎಲ್ಲ ಕೋನಗಳಲ್ಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಇದರಲ್ಲಿ ಬೇರೆಯವರು ಬಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅದೇ ರೀತಿ ಮಣಿಪಾಲ ಪೊಲೀಸರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ತಪ್ಪು ಕಂಡು ಬಂದರೆ ಅವರ ವಿರುದ್ಧವೂ ವರದಿ ಸಲ್ಲಿಸಲಾಗುವುದು ಎಂದು ಎಸ್ಪಿ ಮಾರ್ಟಿನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಐಡಿ ಡಿವೈಎಸ್ಪಿ ಚಂದ್ರಶೇಖರ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಉಪಸ್ಥಿತರಿದ್ದರು.

70 ಹೇಳಿಕೆಗಳು, 149 ಸಾಕ್ಷಗಳು

ಪ್ರಕರಣಕ್ಕೆ ಸಂಬಂಧಿಸಿ ತಾಂತ್ರಿಕ ಸಾಕ್ಷ, ವಿಶೇಷ ತಜ್ಞರ ಸಾಕ್ಷ, ಜನರು ನೀಡಿದ ಹೇಳಿಕೆಯ ಸಾಕ್ಷ ಸೇರಿದಂತೆ ಒಟ್ಟು 149 ಸಾಕ್ಷಗಳನ್ನು ಸಂಗ್ರಹಿಸ ಲಾಗಿದೆ. 70 ಮಂದಿಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. 1,2,3ನೆ ಆರೋಪಿಗಳ ವಿರುದ್ಧ ಕಲಂ 302, 201, 204, 120(ಬಿ), ರೆ/ವಿ34 ಐಪಿಸಿ ಮತ್ತು ನಾಲ್ಕು ಮತ್ತು ಐದನೆ ಆರೋಪಿಗಳ ವಿರುದ್ಧ ಕಲಂ 201 ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆಯಲ್ಲಿ ಸಿಐಡಿ ಡಿಜಿ, ಎಡಿಜಿಪಿ, ಡಿಐಜಿ, ಇಬ್ಬರು ಎಸ್ಪಿ, ನಾಲ್ಕು ಡಿವೈಎಸ್ಪಿ, ಮೂವರು ನಿರೀಕ್ಷಕರು ಸೇರಿದಂತೆ 15 ಮಂದಿ ಭಾಗಿಯಾಗಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.

ಡಿಎನ್‌ಎ ಪರೀಕ್ಷೆಯ ವರದಿ ಹಾಗೂ ವಿಲ್‌ಗೆ ಸಂಬಂದಿಸಿದ ದಾಖಲೆ ಗಳನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದೇವೆ. ಮೊಬೈಲ್ ಕರೆಗೆ ಸಂಬಂಧಿಸಿದ ಸೈಬರ್ ಫೋರೆನ್ಸಿಕ್ ಸಹಿತ ಕೆಲವು ವರದಿಗಳು ಬರಲು ಬಾಕಿ ಇವೆ ಎಂದವರು ತಿಳಿಸಿದರು.

ಅಂಡರ್‌ವರ್ಲ್ಡ್ ಲಿಂಕ್ ಇಲ್ಲ

ನಿರಂಜನ್ ಭಟ್ ಮುಂಬೈಯ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಕೊಲೆ ಮಾಡಿರುವುದು ನೀವೇ ಎಂಬುದಾಗಿ ಒಪ್ಪಿಕೊಂಡರೆ ಹಣ ಕೊಡುವುದಾಗಿ ಆಮಿಷ ಒಡ್ಡಿದ್ದನು. ಈಗ ಆ ವ್ಯಕ್ತಿಯನ್ನು ಸಿಐಡಿ ಪೊಲೀಸರು ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಇದನ್ನು ಸ್ಪಷ್ಟಪಡಿಸಿದ ಸಿಐಡಿ ಎಸ್ಪಿ, ತನಿಖೆಯ ದೃಷ್ಠಿಯಿಂದ ಆ ಸಾಕ್ಷಿಯ ಹೆಸರು ಹೇಳಲು ಆಗಲ್ಲ ಎಂದರು.

ಈ ಪ್ರಕರಣದಲ್ಲಿ ಅಂಡರ್ ವರ್ಲ್ಡ್ ಲಿಂಕ್ ಇರುವುದು ಸದ್ಯಕ್ಕೆ ನಮ್ಮ ಗಮನಕ್ಕೆ ಬಂದಿಲ್ಲ. ಮುಂದೆ ತನಿಖೆಯ ಸಂದರ್ಭದಲ್ಲಿ ಈ ಬಗ್ಗೆ ವಿಚಾರಿಸಲಾಗುವುದು ಎಂದರು. 

ಭಾಸ್ಕರ್ ಶೆಟ್ಟಿ ಸತ್ತದ್ದು ಎಲ್ಲಿ?

ಸಿಐಡಿ ಪೊಲೀಸರ ಪ್ರಕಾರ ಮೂವರು ಆರೋಪಿಗಳು ಭಾಸ್ಕರ್ ಶೆಟ್ಟಿಯ ಮುಖದ ಮೇಲೆ ಪೆಪ್ಪರ್ ಸ್ಪ್ರೆ ಹಾಕಿ ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಹೊಡೆದು ನಂತರ ಕೀಟ ನಾಶಕ ಔಷಧವನ್ನು ಕುಡಿಸಿ ಅವರ ಪ್ರಜ್ಞೆ ತಪ್ಪುವಂತೆ ಮಾಡಿ, ಬಳಿಕ ಕಾರಿನ ಡಿಕ್ಕಿಯಲ್ಲಿ ಅವರನ್ನು ಹಾಕಿ ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಗೆ ತೆಗೆದುಕೊಂಡು ಬಂದು ಹೋಮ ಕುಂಡದಲ್ಲಿ ಭಾಸ್ಕರ್ ಶೆಟ್ಟಿಯ ದೇಹವನ್ನು ಇಟ್ಟು ಸುಟ್ಟರು. ಭಾಸ್ಕರ್ ಶೆಟ್ಟಿಯವರು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News