ಬೆಳಕು ನೀಡುವ ಹಣತೆಯಾಗೋಣ: ಮಾಧವಿ ಭಂಡಾರಿ

Update: 2016-11-02 15:24 GMT

ಉಡುಪಿ, ನ.2: ಸಿಡಿಯುವ ಪಟಾಕಿಗಳಾಗುವುದಕ್ಕಿಂತ ಹೊತ್ತಿ ಉರಿದು ಬೆಳಕು ನೀಡುವ ಹಣತೆಯಾಗುವುದು ಉತ್ತಮ ಎಂದು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಮಾಜಿ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ ಹೇಳಿದ್ದಾರೆ.

ಬುಧವಾರ ಉಡುಪಿ ಶೋಕಮಾತಾ ಇಗರ್ಜಿಯ ಆವರಣದಲ್ಲಿ ಸೌಹಾರ್ದ ಸಮಿತಿ ಕೆಥೊಲಿಕ್ ಸಭಾ ಉಡುಪಿ ಘಟಕ ಇದರ ವತಿಯಿಂದ ಜರಗಿದ ಸರ್ವಧರ್ಮ ದೀಪಾವಳಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಸಮಾಜ ಅಹಂಕಾರ, ಅಂಧಕಾರದ ಕತ್ತಲೆಯಿಂದ ನಲುಗುತ್ತಿದ್ದು ಜ್ಞಾನದ ಹಾಗೂ ಸೌಹಾರ್ದತೆಯ ಬೆಳಕು ಎಲ್ಲೆಡೆ ಪಸರಿಸುವ ಕೆಲಸ ನಡೆಯಬೇಕಾಗಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಲು ಒಂದು ವದಂತಿ ಸಾಕು. ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವ ಇಂದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು, ಮನುಷ್ಯನ ಬದುಕು ಸಂಕೀರ್ಣವಾಗುತ್ತಿದೆ ಎಂದರು.

ಪರಸ್ಪರ ಮುಖವನ್ನು ನೋಡಿಕೊಂಡು ಅರ್ಥ ಮಾಡಿಕೊಂಡಾಗ ನಮ್ಮಲ್ಲಿ ಇದ್ದ ಅಪನಂಬಿಕೆ ಕಳೆದು ಪ್ರೀತಿಯ ಬೆಳಕಿನ ಸಂದೇಶ ಬೀರುವ ಕೆಲಸ ಪ್ರತಿಯೊಬ್ಬರಿಂದ ನಡೆಯಬೇಕಾಗಿದೆ. ಯಾವುದೇ ಧರ್ಮವೂ ಕತ್ತಲೆಯ ಉಪಾಸನೆಯನ್ನು ಮಾಡುವುದಿಲ್ಲ. ಬದಲಾಗಿ ಬೆಳಕು ನಮ್ಮಳಗಿನ ಕಾಂತಿಯ ಪ್ರತೀಕವಾಗಿದ್ದು ಬೆಳಕಿನ ವ್ಯಕ್ತಿಗಳಾಗಿ ಬದುಕಲು ಪ್ರಯತ್ನಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ. ಫ್ರೆಡ್ ಮಸ್ಕರೇನ್ಹಸ್ ವಹಿಸಿದ್ದರು. ಲೊಂಬಾರ್ಡ್ ಸ್ಮಾರಕ ಮಿಶನ್ ಆಸ್ಪತ್ರೆ ಉಡುಪಿ ಮತ್ತು ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇದರ ನಿರ್ದೇಶಕರಾದ ಡಾ.ಸುಶೀಲ್ ಜತ್ತನ್ನ, ಎಂಇಟಿ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಜನಾಬ್ ಖಲೀಲ್ ಅಹಮ್ಮದ್, ಕೆಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ ಧರ್ಮಪ್ರಾಂತದ ಕಾರ್ಯದರ್ಶಿ ವಂ. ಲೋರೆನ್ಸ್ ಡಿಸೋಜಾ, ಉಡುಪಿ ಚರ್ಚ್‌ನ ಸಹಾಯಕ ಧರ್ಮಗುರು ವಂ.ರೋಯ್ಸನ್ ಫೆರ್ನಾಂಡಿಸ್, ಸೌಹಾರ್ದ ಸಮಿತಿಯ ಗ್ರೇಶನ್ ಬುತೆಲ್ಲೊ, ಬೆನಡಿಕ್ಟಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸೌಹಾರ್ದ ಸಮಿತಯ ಸಂಚಾಲಕ ಅಲ್ಫೋನ್ಸ್ ಡಿಕೋಸ್ತಾ ಸ್ವಾಗತಿಸಿ, ಮಹಮ್ಮದ್ ಮೌಲಾ ವಂದಿಸಿದರು. ಅಮೃತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯ ಬೃಹತ್ ಗಾತ್ರದ ಗೋಪುರ ದೀಪದ ಪ್ರದರ್ಶನ, ಗೂಡುದೀಪಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಸಿಹಿತಿಂಡಿ ವಿತರಣೆ, ಹಣತೆಗಳ ಬೆಳಗುವಿಕೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News