ಸರಕಾರಿ ಹಾಸ್ಟೆಲ್ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ

Update: 2016-11-02 15:39 GMT

ಉಡುಪಿ, ನ.2: ಸರಕಾರಿ ಹಾಸ್ಟೆಲ್ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಮಣಿಪಾಲ ಜಿಲ್ಲಾಧಿಕಾರಿ ಕಛೇರಿ ಎದುರು ಮುಷ್ಕರ ನಡೆಸಲಾಯಿತು.

ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ವಸತಿ ಶಾಲಾ ಕಾಲೇಜುಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾ ಸಿಬ್ಬಂದಿಗಳು, ಜವಾನರು, ಕಾವಲುಗಾರರು, ಹೊರಗುತ್ತಿಗೆ ಹುದ್ದೆಗಳಲ್ಲಿ ದುಡಿಯುತ್ತಿರುವ ಎಲ್ಲಾ ಹೊರ ಗುತ್ತಿಗೆ ನೌಕರರನ್ನು ಆಯಾ ಹುದ್ದೆಗಳಲ್ಲಿ ಖಾಯಂ ಮಾಡಬೇಕು. ಡಿ ಗ್ರೂಪ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ಎಲ್ಲಾ ಡಿ ವರ್ಗದ ನೌಕರರಿಗೆ ಖಾಯಂ ಮತ್ತು ಹೊರಗುತ್ತಿಗೆ ಎಂಬ ತಾರತಮ್ಯ ಮಾಡದೇ ಏಕರೂಪದ ವೇತನ ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮ ತಪ್ಪದೇ ಪಾಲಿಸಬೇಕು. 2015ರ ಎ.1ರಿಂದ ಜಾರಿಗೆ ಬಂದಿರುವ ಹಾಸ್ಟೆಲ್ ನೌಕರರ ಪರಿಷ್ಕೃತ ಕನಿಷ್ಠ ವೇತನ ಅಧಿ ಸೂಚನೆಗೆ ತರಲಾದ ಕೋರ್ಟು ತಡೆಯಾಜ್ಞೆಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಮುಷ್ಕರ ನಿರತರು ಸರಕಾರವನ್ನು ಒತ್ತಾಯಿಸಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕವಿರಾಜ್, ರತ್ನಾಕರ್, ಜಯಂತಿ, ಶುಭಾ, ಪ್ರೇಮಾ, ಗಜಾನನ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News