ವಹೀದಾ ಇಸ್ಮಾಯೀಲ್, ವಸಂತ ಬಂಗೇರರಿಗೆ ‘ನಿಗಮ’ದ ಹೊಣೆ
ಮಂಗಳೂರು, ನ.2: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ಅವರಿಗೆ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಗೇರಾರ ಅತೃಪ್ತಿ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ. ತನ್ಮಧ್ಯೆ ಸುಳ್ಯದ ಬೆಳ್ಳಾರೆಯಲ್ಲಿ ಕೊಲೆಯಾದ ಇಸ್ಮಾಯೀಲ್‌ರ ಪತ್ನಿ ವಹೀದಾರಿಗೆ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಂದಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆಕಾಂಕ್ಷಿಗಳಾಗಿದ್ದರು. ಬಿಜೆಪಿ, ಜನತಾದಳ, ಕಾಂಗ್ರೆಸ್ ಹೀಗೆ ಮೂರು ಪಕ್ಷಗಳ ಮೂಲಕ ಐದು ಬಾರಿ ಶಾಸಕರಾಗಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತರೂ ಆಗಿದ್ದ ವಸಂತ ಬಂಗೇರಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಅಲ್ಲದೆ ಯಾವುದೇ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಬೇಡ ಎಂದಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ಈ ಮಧ್ಯೆ ಇತ್ತೀಚೆಗೆ ಕೊಲೆಯಾದ ಇಸ್ಮಾಯೀಲ್‌ರ ಪತ್ನಿ ವಹೀದಾರಿಗೂ ಸ್ಥಾನ ಕಲ್ಪಿಸಲಾಗಿದೆ. ಇವರು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸಹಿತ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ವಹೀದಾರನ್ನು ನೇಮಿಸುವ ಮೂಲಕ ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.