ಬಿಜೆಪಿಗೆ ಸಂಶಯ ಬಂದವರನ್ನು ಇದೇ ರೀತಿ ಮುಗಿಸಬೇಕು : ಆಝಮ್ ಖಾನ್
ಲಕ್ನೋ, ನ.3: ಭೋಪಾಲದಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದರೆನ್ನಲಾದ ಎಂಟು ಮಂದಿ ಸಿಮಿ ಕಾರ್ಯಕರ್ತರನ್ನು ಪೊಲೀಸರು ಗುಂಡಿಟ್ಟು ಕೊಂದ ಘಟನೆಯ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶ ಸಚಿವ ಆಝಮ್ ಖಾನ್, ಈ ಎನ್ಕೌಂಟರ್ ನಲ್ಲಿ ಯಾವುದೇ ತಪ್ಪಿಲ್ಲ ಹಾಗೂ ಕೋರ್ಟುಗಳಲ್ಲಿ ಹಲವು ಕಾಲದಿಂದ ಬಾಕಿಯಾಗಿದ್ದ ನ್ಯಾಯವನ್ನು ರಾಜ್ಯ ಸರಕಾರ ಒದಗಿಸಿದೆ ಎಂದು ಹೇಳಿದ್ದಾರೆ.
‘‘ಯಾರಾದರೂ ತಪ್ಪು ಮಾಡಿದ್ದಾರೆಂದು ಬಿಜೆಪಿಗೆ ಸಂಶಯವಿದ್ದರೆ, ಆತ ಜೈಲಿನಲ್ಲಿರಲಿ, ಅಥವಾ ಹೊರಗಿರಲಿ, ಕಾನೂನು ತನ್ನ ಕ್ರಮ ಕೈಗೊಳ್ಳುವುದನ್ನು ಕಾಯುವ ಬದಲು ಈ ವಿಧದಲ್ಲಿಯೇ ಆತನನ್ನು ಕೊಲ್ಲಬೇಕು’ ಎಂದು ಹೇಳಿದರು.
ಎಂಟು ಮಂದಿ ಸಿಮಿ ಕಾರ್ಯಕರ್ತರನ್ನು ಕೊಲ್ಲುವ ರಾಜ್ಯ ಸರಕಾರದ ನಿರ್ಧಾರ ಸರಿಯಾಗಿದೆ ಹಾಗೂ ಈ ವಿಚಾರದಲ್ಲಿ ಸರಕಾರ ನ್ಯಾಯ ಸಿಗುವಂತೆ ನೋಡಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. ‘‘ಈ ಎನ್ಕೌಂಟರ್ ಮೂಲಕ ಬಿಜೆಪಿ ಮುಂದಿನ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ಸಂದರ್ಭ ಲಾಭ ಪಡೆಯುವ ಸಾಧ್ಯತೆಯಿದೆ’’ ಎಂದವರು ಹೇಳಿದರು.