Delhi Air Pollution | ಜನರು ಗ್ಯಾಸ್ ಚೇಂಬರ್ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ: ಕಾಂಗ್ರೆಸ್ ವಾಗ್ದಾಳಿ
ಪ್ರಮೋದ್ ತಿವಾರಿ | Photo Credit : PTI
ಹೊಸದಿಲ್ಲಿ, ಡಿ. 18: ದಿಲ್ಲಿಯಲ್ಲಿ ಬಿಗಡಾಯಿಸುತ್ತಿರುವ ವಾಯು ಮಾಲಿನ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಗುರುವಾರ ಕೇಂದ್ರ ಮತ್ತು ದಿಲ್ಲಿ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯ ನಿವಾಸಿಗಳು ‘‘ಗ್ಯಾಸ್ ಚೇಂಬರ್‌ನಲ್ಲಿ ಸಿಕ್ಕಿಹಾಕಿಕೊಂಡು’’ ಉಸಿರಾಡಲು ಒದ್ದಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಇಂದು ದಿಲ್ಲಿಯಲ್ಲಿ ಉಸಿರಾಡುವುದು ಕಷ್ಟವಾಗಿದೆ, ಮಾತನಾಡುವುದು ಕಷ್ಟವಾಗಿದೆ. ದಿಲ್ಲಿಯ ನಿವಾಸಿಗಳು ಗ್ಯಾಸ್ ಚೇಂಬರ್ ನಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡಲು ಒದ್ದಾಡುತ್ತಿದ್ದಾರೆ. ಹನ್ನೊಂದು ವರ್ಷಗಳಿಂದ ಮೋದಿ ಸರಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅವರು ಏನು ಮಾಡಿದ್ದಾರೆ? ಹಿಂದಿನ ಆಪ್ ಸರಕಾರವೂ ಇದಕ್ಕೆ ಜವಾಬ್ದಾರಿಯಾಗಿದೆ. ಈ ಎರಡೂ ಪಕ್ಷಗಳು ದಿಲ್ಲಿ ಜನರ ಬದುಕನ್ನು ದುರ್ಭರಗೊಳಿಸಿವೆ. ದಿಲ್ಲಿಯಲ್ಲಿ ಸಾಮಾನ್ಯ ಜನರು ಉಸಿರಾಡಲು ಹೆದರುತ್ತಿದ್ದಾರೆ’’ ಎಂದು ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತಿವಾರಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಕಮಲ್‌ಜೀತ್ ಸೆಹ್ರಾವತ್, ದಿಲ್ಲಿಯ ಮಾಲಿನ್ಯ ಮಟ್ಟ ಕಳವಳದ ಸಂಗತಿಯಾಗಿದೆ ಎಂದರು. ‘‘ಆದರೆ, ಕಳೆದ 26-27 ವರ್ಷಗಳಲ್ಲಿ ದಿಲ್ಲಿಯಲ್ಲಿ ಬಿಜೆಪಿ ಸರಕಾರವಿರಲಿಲ್ಲ. ಮಾಲಿನ್ಯ ನಿಯಂತ್ರಣಕ್ಕೆ ದಿಲ್ಲಿ ಸರಕಾರವು ಯಾವುದೇ ಗಟ್ಟಿ ನೀತಿಯನ್ನು ರೂಪಿಸಿಲ್ಲ ಎನ್ನುವುದು ನಮಗೆ ಇತ್ತೀಚೆಗೆ ತಿಳಿಯಿತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದದ್ದು ಫೆಬ್ರವರಿಯಲ್ಲಿ. ಮಾಲಿನ್ಯ ನಿವಾರಣೆಗೆ ವೈಜ್ಞಾನಿಕ ಅಧ್ಯಯನವೊಂದು ನಡೆಯಬೇಕಾಗಿದೆ’’ ಎಂದು ಹೇಳಿದರು.