×
Ad

ಕರ್ತವ್ಯ ನಿಷ್ಠೆ ಅಂದ್ರೆ ಇದಪ್ಪಾ...!

Update: 2016-11-03 16:56 IST
ಬುಧವಾರ (ನ. 2) ರಾತ್ರಿ 8.55ರ ವೇಳೆಗೆ ಮಂಗಳೂರಿನ ನಂತೂರು ವೃತ್ತದಲ್ಲಿ ಎಂ. ಬಾಬು ಶೆಟ್ಟಿಯವರು ಕರ್ತವ್ಯದಲ್ಲಿ ನಿರತರಾಗಿರುವುದು.

ಮಂಗಳೂರು, ನ.3: ಇವರ ಹೆಸರು ಎಂ. ಬಾಬು ಶೆಟ್ಟಿ. ವೃತ್ತಿಯಲ್ಲಿ ಟ್ರಾಫಿಕ್ ಪೊಲೀಸ್. ಬಹುತೇಕವಾಗಿ ನಗರದ ನಂತೂರು ವೃತ್ತದಲ್ಲಿ ಇವರನ್ನು ಕಾಣಬಹುದು. ಇವರಲ್ಲೇನು ವಿಶೇಷತೆ ಅಂತೀರಾ..

ವಿಶೇಷ ಸಂದರ್ಭ ಹಾಗೂ ದಿನಗಳನ್ನು ಹೊರತುಪಡಿಸಿ ಬಹುತೇಕವಾಗಿ ರಾತ್ರಿ 8 ಗಂಟೆಯ ನಂತರ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಪೊಲೀಸರು ಕರ್ತವ್ಯದಲ್ಲಿರುವುದು ಅಪರೂಪ. ಆದರೆ ಇವರು ಮಾತ್ರ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ರಾತ್ರಿ 9 ಗಂಟೆಯವರೆಗೂ ಬ್ಯುಸಿ ರಸ್ತೆಯ ಸರ್ಕಲ್‌ಗಳ ಮಧ್ಯೆ ನಿಂತು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುತ್ತಿರುತ್ತಾರೆ.

ವೃತ್ತಿಯಿಂದ ನಿವೃತ್ತಿಗೆ ಇನ್ನೇನೂ ಒಂದು ವರ್ಷ ಐದು ತಿಂಗಳಷ್ಟೇ ಬಾಕಿ ಇದ್ದರೂ ಇವರು ತಮ್ಮ ಕರ್ತವ್ಯ ನಿಷ್ಠೆಯಿಂದ ವಿಮುಖರಾಗದಿರುವುದು ಇವರಲ್ಲಿನ ವಿಶೇಷತೆ. ನಗರದ ಅಪಾಯಕಾರಿ ಹಾಗೂ ಅತ್ಯಂತ ವಾಹನ ನಿಬಿಡವಾದ ವೃತ್ತವಾಗಿರುವ ನಂತೂರಿನ ಸಂಚಾರ ವ್ಯವಸ್ಥೆಯ ನಿರ್ವಹಣೆಯಲ್ಲಿ ಇವರು ಕರ್ತವ್ಯದಲ್ಲಿದ್ದರೆ ರಾತ್ರಿ 9 ಗಂಟೆಯವರೆಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದು.

ಕಳೆದ ಮೂರು ವರ್ಷಗಳಿಂದ ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯದಲ್ಲಿರುವ ಬಾಬು ಶೆಟ್ಟಿ, ಕಳೆದ ಸುಮಾರು 30 ವರ್ಷಗಳಿಂದ ಪೊಲೀಸ್ ಠಾಣೆಗಳಲ್ಲಿ ವಿವಿಧ ರೀತಿಯ ಕರ್ತವ್ಯ ನಿರ್ವಹಿಸಿದ್ದಾರೆ. ಶಕ್ತಿನಗರದಲ್ಲಿ ಮನೆಯನ್ನು ಹೊಂದಿರುವ ಇವರು, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಜೀವನ ನಡೆಸುತ್ತಿದ್ದಾರೆ. ಮಗ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಮಗಳು ಎಸೆಸೆಲ್ಸಿ ವಿದ್ಯಾರ್ಥಿನಿ.

ಬಿಸಿಲು, ಮಳೆ, ಗಾಳಿ, ಚಳಿ ಎನ್ನದೆ ದುಡಿಯಬೇಕಾದ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಅವರನ್ನು ಪ್ರಶ್ನಿಸಿದರೆ, ಕೆಲಸ ಯಾವುದಾದರೂ ಸರಿ. ನಾವು ಮಾಡುವ ಕೆಲಸದಲ್ಲಿ ನಮಗ ತೃಪ್ತಿ ಸಿಗಬೇಕು ಎಂಬ ಬಾಬು ಶೆಟ್ಟಿ ಅವರ ಮಾತುಗಳಲ್ಲೇ ಅವರ ಕರ್ತವ್ಯ ನಿಷ್ಠೆಯನ್ನು ಗಮನಿಸಬಹುದು. ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಇವರ ಕರ್ತವ್ಯದ ಅವಧಿ. ನನ್ನ ವೃತ್ತಿಯ ಬಗ್ಗೆ ನನಗೆ ಗೌರವವಿದೆ. ಪರಿಸ್ಥಿತಿ ಹೇಗೇ ಇದ್ದರೂ ನಮ್ಮ ಕರ್ತವ್ಯದ ಬಗ್ಗೆ ನಮಗೆ ಪ್ರೀತಿ ಇದ್ದಲ್ಲಿ, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಲ್ಲಿ ನಮಗೆ ಸಿಗುವ ತೃಪ್ತಿಯೇ ನಮಗೆ ಸಾಕು. ವೇತನ ಕಡಿಮೆ ಇರಬಹುದು. ನಮ್ಮ ಜೀವನದ ಇಂದಿನ ಬೇಡಿಕೆಗಳಿಗೆ ಅದು ಸಾಕಾಗದಿರಬಹುದು. ಹಾಗಿದ್ದರೂ ನನಗೆ ನನ್ನ ಕೆಲಸದ ಬಗ್ಗೆ ಪ್ರೀತಿ ಇದೆ ಎನ್ನುತ್ತಾರೆ ಬಾಬು ಶೆಟ್ಟಿ.

ನಿಮಗೆ ಸಿಗುವ ವೇತನದಲ್ಲಿ ನಿಮಗೆ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ, ‘‘ನಮಗೆ ಎಷ್ಟು ಸಿಕ್ಕಿದರೂ ಸಾಲುವುದಿಲ್ಲ. ಮತ್ತಷ್ಟು ಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆದರೆ ನನಗಿಂತಲೂ ಕಡಿಮೆ ವೇತನದಲ್ಲಿ ದುಡಿಯುವವರನ್ನು ನೋಡುವಾಗ ನನ್ನ ವೇತನ ನನಗೆ ದೊಡ್ಡದೆನಿಸುತ್ತದೆ. ಕೆಲಸ ಯಾವುದಾಗಿದ್ದರೂ ಅದನ್ನು ನಿಯತ್ತಿನಿಂದ ನಿರ್ವಹಿಸಬೇಕು ಎಂಬುದು ನನ್ನ ಭಾವನೆ’ ಎಂದು ಭಾವನಾತ್ಮಕವಾಗಿಯೇ ಉತ್ತರಿಸುತ್ತಾರೆ.

‘‘ಬಾಬು ಶೆಟ್ಟಿಯವರನ್ನು ನಾನು ತುಂಬಾ ಗಮನಿಸಿದ್ದೇನೆ. ಇತರರಂತೆ ಅವರು ಬಿಸಿಲಿರುವಾಗ ನೆರಳಲ್ಲಿ ನಿಂತು ಸಂಚಾರ ನಿರ್ವಹಣೆಯನ್ನು ಮಾಡುವುದಾಗಲಿ ಮಾಡುವುದಿಲ್ಲ. ರಾತ್ರಿ ಒಂಬತ್ತು ಗಂಟೆಯವರೆಗೂ ಸರ್ಕಲ್ ನಡುವೆಯೇ ಇದ್ದು ಕರ್ತವ್ಯ ನಿರ್ವಹಿಸುತ್ತಾರೆ’’ಎಂದು ಹಲವು ಸಂದರ್ಭಗಳಲ್ಲಿ ಬಾಬು ಶೆಟ್ಟಿ ಜತೆ ಸಂಚಾರ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಟ್ರಾಫಿಕ್ ವಾರ್ಡನ್ ಆಗಿ, ಸ್ವ ಇಚ್ಛೆಯಿಂದ ಉಚಿತ ಸೇವೆಯನ್ನು ನೀಡುತ್ತಿರುವ ಸ್ಥಳೀಯರಾದ ಫ್ರಾನ್ಸಿಸ್ ಮ್ಯಾಕ್ಸಿಂ ಮೊರಾಸ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಈ ಟ್ರಾಫಿಕ್ ಪೊಲೀಸರಿಗೆ ಬಿಸಿಲು, ಗಾಳಿ, ಚಳಿ, ಮಳೆ ಎಂಬುದಿಲ್ಲ. ಹವಾಮಾನ ಪರಿಸ್ಥಿತಿ ಅದು ಹೇಗೇ ನಗರದ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಖಾತರಿ ಪಡಿಸುವುದು ಇವರ ಕೆಲಸ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪಾಳಿಯಲ್ಲಿ ಇವರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಎಲ್ಲರೂ ತಮ್ಮ ಕರ್ತವ್ಯದ ಅವಧಿಯನ್ನು, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂದು ಹೇಳಲಾಗದು. ಕೆಲ ಸಂದರ್ಭಗಳಲ್ಲಿ ಅದನ್ನು ಬಯಸುವುದು ಅಸಹಜವಾಗಿದ್ದರೂ, ಕೆಲವೊಮ್ಮೆ ಕೆಲವರು ತಮ್ಮ ವಿಶೇಷತೆಯ ಮೂಲಕ ಗಮನ ಸೆಳೆದು ಬಿಡುತ್ತಾರಷ್ಟೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News