ಬಿ.ಸಿ.ರೋಡ್ ವೃತ್ತಕ್ಕೆ ’ಬ್ರಹ್ಮಶ್ರೀ ನಾರಾಯಣ ಗುರು’ ಹೆಸರು

Update: 2016-11-03 11:39 GMT

ಬಂಟ್ವಾಳ, ನ. 3: ತಾಲೂಕು ಕೇಂದ್ರ ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದು ಹೆಸರಿಸಲು ಪುರಸಬೆ, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಸ್ತು ಎಂದಿದೆ. ಈ ವೃತ್ತಕ್ಕೆ ’ನಾರಾಯಣಗುರು ವೃತ್ತ’ ಹೆಸರು ಅಧಿಕೃತಗೊಂಡಿದ್ದು ಈ ಮೂಲಕ ವೃತ್ತಕ್ಕೆ ನಾಮಕರಣಗೊಳಿಸುವ ಕುರಿತಾದ ಹಲವು ವರ್ಷಗಳ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಇದೀಗ ಪಂಚ ರಸ್ತೆಗಳ ಸಂಗಮದಲ್ಲಿ ‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಸಂದೇಶ ಸಾರುವ ಪೀಠವೂ ನಿರ್ಮಾಣಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್‌ನ ಈ ಮುಖ್ಯ ವೃತ್ತ ಹಲವು ವರ್ಷಗಳಿಂದ ಅವೈಜ್ಞಾನಿಕವಾಗಿತ್ತು. ನಿರ್ದಿಷ್ಟವಾದ ಹೆಸರಿಲ್ಲದೆ ಬಿ.ಸಿ.ರೋಡು ಸರ್ಕಲ್ ಎಂದು ಕರೆಯಲಾಗುತ್ತಿತ್ತು. ಈ ವೃತ್ತಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಯುವವಾಹಿನಿ ಘಟಕವು ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರು ಹೆಸರನ್ನು ನಾಮಕರಣಗೊಳಿಸುವಂತೆ ಪುರಸಭೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಗೆ ಲಿಖಿತ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಹೆಸರನ್ನು ನಾಮಕರಣಗೊಳಿಸಲು ನಿರ್ಣಯಕೈಗೊಂಡು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗಿತ್ತು.

ದಲಿತ ಸಂಘಟನೆಗಳು ಈ ವೃತ್ತಕ್ಕೆ ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಹೆಸರನ್ನು ನಾಮಕರಣಗೊಳಿಸಬೇಕೆಂದು ಪ್ರಸ್ತಾವನೆ ಸಲ್ಲಿಸಿತ್ತು. ಹಾಗೆಯೇ ತಾಲೂಕು ಕುಲಾಲ ಸುಧಾರಕ ಸಂಘವು ಸ್ವಾತಂತ್ರ್ಯ ಹೋರಾಟಗಾರ ದಿ.ಅಮ್ಮೆಂಬಳ ಬಾಳಪ್ಪರ ಹೆಸರನ್ನು ಇಡಬೇಕೆಂಬ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಜೊತೆಗೆ ತಾಲೂಕಿನಲ್ಲಿಯೇ ಹುಟ್ಟಿ ಬೆಳೆದು ಸಾಧನೆಗೈದ ವೈಕುಂಠ ಬಾಳಿಗಾ, ಲೀಲಾವತಿ, ಪಂಜೆಮಂಗೇಶರಾಯರ ಹೆಸರನ್ನು ಇಡಬೇಕೆಂಬ ಆಗ್ರಹಗಳೂ ಕೇಳಿ ಬಂದಿತ್ತು.

ಆದರೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಚರ್ಚಿಸಿ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರನ್ನು ಅನುಮೋದಿಸಿ ಜಿಲ್ಲಾಧಿಕಾರಿಗೆ ಮುಂದಿನ ಪ್ರಕ್ರಿಯೆಗೆ ಕಳುಹಿಸಿಕೊಟ್ಟಿತು. ಈ ನಡುವೆ ದಲಿತ ಸಂಘಟನೆಯ ಮುಖಂಡರು ಎಸ್ಸಿ-ಎಸ್ಟಿಗಳ ಕುಂದುಕೊರತೆಯ ಸಭೆಗಳಲ್ಲಿಯೂ ಪ್ರಸ್ತಾಪಿಸಿ ಡಾ. ಬಾಬಾ ಸಾಹೇಬ್‌ರ ಹೆಸರನ್ನು ಚರ್ಚೆಗೂ ತೆಗೆದುಕೊಳ್ಳದ ಪುರಸಭೆಯ ನಿಲುವನ್ನು ಪ್ರಶ್ನಿಸಿದ್ದರಲ್ಲದೆ, ತಾಲೂಕಿನ ಸಾಧಕರ ಹೆಸರನ್ನಾದರೂ ನಾಮಕರಣಗೊಳಿಸುವುದು ಸೂಕ್ತ ಎನ್ನುವ ವಾದವನ್ನು ಮಂಡಿಸಿದ್ದರು. ಆದರೆ ಇದೀಗ ಬಿ.ಸಿ.ರೋಡು ಮುಖ್ಯವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂಬ ಹೆಸರೇ ಅಧಿಕೃತಗೊಂಡಿದೆ. ಇನ್ನು ಮುಂದಕ್ಕೆ ಬಿ.ಸಿ.ರೋಡು ವೃತ್ತ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದು ಕರೆಸಿಕೊಳ್ಳಲಿದೆ.

ಬಿ.ಸಿ.ರೋಡ್ ಮುಖ್ಯವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಬಂಟ್ವಾಳ ಪುರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಯಂತೆ ಪುರಸಭೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಕಳುಹಿಸಿತ್ತು. ನಾಮಕರಣದ ಬಗ್ಗೆ ಆಕ್ಷೇಪ ಇದೆಯೆ ಎಂದು ವಿವರ ಕೋರಿ ಜಿಲ್ಲಾ ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಪೊಲೀಸ್ ಠಾಣೆ ಮತ್ತು ಪುರಸಭೆೆಗೆ ಸೂಚಿಸಿತ್ತು. ಸಾರ್ವಜನಿಕರಿಂದ ಹಾಗೂ ಯಾವುದೇ ಸಂಘ-ಸಂಸ್ಥೆಗಳಿಂದ ಆಕ್ಷೇಪ ಬಾರದ ಹಿನ್ನೆಲೆಯಲ್ಲಿ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರನ್ನು ನಾಮಕರಣ ಮಾಡಲಾಗಿದೆ. ಈ ವೃತ್ತದ ನಿರ್ವಹಣೆಯನ್ನು ಸಂಘವು ಮಾಡಲಿದ್ದು ಪೀಠದ ಮೇಲೆ ನಾರಾಂುಣಗುರುಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದಿಲ್ಲ. ಮುಂದಿನ ದಿನಗಳಲ್ಲಿ ಈ ವೃತ್ತವನ್ನು ಸುಂದರವಾಗಿ ಅಭಿವೃದ್ಧಿಗೊಳಿಸಲಾಗುವುದು.

- ಬೇಬಿ ಕುಂದರ್, ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News