ನ.6: ಬೆಳುವಾಯಿಯಲ್ಲಿ ಜಮೀಯತುಲ್ ಫಲಾಹ್ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಶಿಲಾನ್ಯಾಸ

Update: 2016-11-03 11:50 GMT

ಮೂಡುಬಿದಿರೆ, ನ.3: ರಾಜ್ಯ ಪ್ರಶಸ್ತಿ ಪಡೆದ ಸರಕಾರೇತರ ಸಂಸ್ಥೆ ಜಮೀಯತುಲ್ ಫಲಾಹ್‌ನ ಮೂಡುಬಿದಿರೆಯ ಜಮೀಯತುಲ್ ಫಲಾಹ್ ಕೌಶಲ್ಯಾಭಿವೃದ್ಧಿ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮವು ನ.6ರಂದು ಬೆಳುವಾಯಿಯ ಚಿಲಿಂಬಿಯಲ್ಲಿ ಅಪರಾಹ್ನ 3:30ಕ್ಕೆ ನಡೆಯಲಿದೆ ಎಂದು ಮೂಡುಬಿದಿರೆ ಜಮೀಯತುಲ್ ಫಲಾಹ್ ಕೌಶಲ್ಯಾಭಿವೃದ್ಧಿ ಕೇಂದ್ರದ ಕಾರ್ಯದರ್ಶಿ ಹಸ್ದುಲ್ಲಾ ಇಸ್ಮಾಯೀಲ್ ತಿಳಿಸಿದ್ದಾರೆ.

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. 1988ರಲ್ಲಿ ಪ್ರಾರಂಭವಾದ ಜಮೀಯತುಲ್ ಫಲಾಹ್ ಸಂಸ್ಥೆಯು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 10 ಘಟಕಗಳನ್ನು ಹೊಂದಿದೆ. 28 ವರ್ಷಗಳಿಂದ ಸಂಸ್ಥೆಯು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಶಸ್ತಿಯನ್ನು ಪಡೆದಿರುತ್ತದೆ ಎಂದು ತಿಳಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಲಿದ್ದು, ದ.ಕ. ಉಡುಪಿ ಜಿಲ್ಲೆಯ ಜಮೀಯತುಲ್ ಫಲಾಹ್‌ನ ಕೆ.ಕೆ. ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸಹಿತ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ 4 ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿ 3 ಶಾಲೆಗಳನ್ನು ಸರಕಾರಿ ಶಾಲೆಗಳಾಗಿ ಪರಿವರ್ತಿಸಿದೆ. ಅಲ್ಲದೆ ಒಂದು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಶಾಲೆಗಳು ಮಾತ್ರವಲ್ಲ ಅವಿಭಜಿತ ಜಿಲ್ಲೆಗಳಲ್ಲಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ದತ್ತು ಸ್ವೀಕಾರ ಮಾಡಿ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದೆ. ಮೂಡುಬಿದಿರೆ ಘಟಕವು ಇದೀಗ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವ ಬಗ್ಗೆ ಚಿಂತನೆ ಮಾಡಿ ಬೆಳುವಾಯಿಯ ಚಿಲಿಂಬಿಯಲ್ಲಿ 6 ಎಕರೆ ಜಾಗವನ್ನು ಖರೀದಿಸಿ ಸುಸಜ್ಜಿತವಾದ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಬೇಕಾದ ವ್ಯವಸ್ಥೆ ಮಾಡಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ ಎಂದು ಇಸ್ಮಾಯೀಲ್ ತಿಳಿಸಿದರು.

ಮೂಡುಬಿದಿರೆ ಜಮೀಯತುಲ್ ಫಲಾಹ್ ಕೌಶಲ್ಯಾಭಿವೃದ್ಧಿ ಕೇಂದ್ರದ ಅಧ್ಯಕ್ಷ ಅಬ್ದುರ್ರವೂಫ್, ಮೂಡುಬಿದಿರೆ ಘಟಕದ ಅಧ್ಯಕ್ಷ ಎಸ್.ಎ. ಗಫೂರ್, ಕಾರ್ಯದರ್ಶಿ ಸಲೀಂ ಹಂಡೇಲ್, ಉಪಾಧ್ಯಕ್ಷ ಮುಹಮ್ಮದ್ ಶರೀಫ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News