×
Ad

ಶಿರ್ತಾಡಿ: ಅಕ್ರಮ ಗೋ ಸಾಗಾಟ, ಪೊಲೀಸರ ಕೊಲೆ ಯತ್ನ

Update: 2016-11-03 18:06 IST

ಮೂಡುಬಿದಿರೆ, ನ.3: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ತಡೆಯಲು ಯತ್ನಿಸಿದ ಪೊಲೀಸರ ಮೇಲೆ ಕಾರು ಹಾಯಿಸಿ, ಕೊಲೆಗೆ ಯತ್ನಿಸಿದ ಘಟನೆ ಶಿರ್ತಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕೊಣಾಜೆಯಲ್ಲಿ ಗುರುವಾರ ನಸುಗಿನ ವೇಳೆ ಸಂಭವಿಸಿದ್ದು, ಘಟನೆ ಸಂದರ್ಭ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಕ್ವಾಲಿಸ್, 7 ದನಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದಿಂದ ಶಿರ್ತಾಡಿ ಕಡೆಗೆ ವಾಹನದಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಆಧಾರದಲ್ಲಿ ಮೂಡುಬಿದಿರೆಯ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಮೂವರು ಸಿಬ್ಬಂದಿ ಪಡುಕೊಣಾಜೆ ಕ್ರಾಸ್‌ನ ಬಳಿ ಗುರುವಾರ ಸುಮಾರು 4 ಗಂಟೆ ವೇಳೆಗೆ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಕ್ವಾಲಿಸ್‌ನಲ್ಲಿ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳು ಪಡುಕೊಣಾಜೆ ಬಳಿ ಪೊಲೀಸರನ್ನು ಗಮನಿಸಿ, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಮಾರೂರು ಕ್ರಾಸ್ ಬಳಿ ಎಸ್ಸೈ ದೇಜಪ್ಪ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದು, ಅಲ್ಲಿಗೆ ಬಂದ ಆರೋಪಿಗಳು ಮತ್ತೆ ಪಡುಕೊಣಾಜೆ ಕ್ರಾಸ್‌ನತ್ತ ತೆರಳಿದ್ದು, ಇನ್‌ಸ್ಪೆಕ್ಟರ್ ಪೊಲೀಸ್ ವಾಹನದ ಮೂಲಕ ಅಡಗಟ್ಟಲು ಪ್ರಯತ್ನಿಸಿದರು. ಈ ವೇಳೆ ಕ್ವಾಲಿಸ್‌ನಲ್ಲಿದ್ದ ಆರೋಪಿಗಳು ಪೊಲೀಸರ ಮೇಲೆ ಜೀಪು ಹಾಯಿಸಲು ಪ್ರಯತ್ನಿಸಿದ್ದು, ಪಕ್ಕದಲ್ಲಿರುವ ಚರಂಡಿ ಹಾರಿ ಪೊಲೀಸರು ಪ್ರಾಣ ಉಳಿಸಿಕೊಂಡಿದ್ದಾರೆ.

ಪರಾರಿಯಾಗಲು ಯತ್ನಿಸಿದ ಆರೋಪಿಗಳು ತುಸು ದೂರ ಹೋಗುತ್ತಿದ್ದಂತೆ ಇನ್‌ಸ್ಪೆಕ್ಟರ್ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಆರೋಪಿಗಳು ಕ್ವಾಲಿಸ್‌ನಿಂದ ಇಳಿದು, ಪಕ್ಕದಲ್ಲಿದ್ದ ಗದ್ದೆ ಮೂಲಕ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ವಶಪಡಿಸಿಕೊಳ್ಳಲಾದ ಕ್ವಾಲಿಸ್‌ನಲ್ಲಿದ್ದ ಆರೋಪಿಗಳ ಕೈಕವಚ, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ, ಕರ್ನಾಟಕ ಗೋಹತ್ಯೆ ಕಾಯ್ದೆ, ಪ್ರಾಣಿ ಹಿಂಸೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News