ಪುತ್ತೂರು: ಹಾಶಿಂ ಶರೀಫ್ ಬಂಧನ ಖಂಡಿಸಿ ಪಿಎಫ್‌ಐನಿಂದ ಧರಣಿ
ಪುತ್ತೂರು, ನ.3: ಪಿಎಫ್‌ಐ ಬೆಂಗಳೂರು ಜಿಲ್ಲಾಧ್ಯಕ್ಷ ಹಾಶಿಂ ಶರೀಫ್‌ರನ್ನು ಬಂಧಿಸಿರುವುದನ್ನು ಖಂಡಿಸಿ ಪುತ್ತೂರು ಪಿಎಫ್‌ಐ ಸಂಘಟನೆಯ ವತಿಯಿಂದ ಬುಧವಾರ ಸಂಜೆ ಇಲ್ಲಿನ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪುತ್ತೂರು ಕ್ಷೇತ್ರ ಎಸ್‌ಡಿಪಿಐ ಅಧ್ಯಕ್ಷ ಕೆ.ಎ. ಸಿದ್ದೀಕ್, ಶಿವಾಜಿ ನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಇದೀಗ ಬಿಜೆಪಿ ಮತ್ತು ಆರೆಸ್ಸೆಸ್‌ನ ಒತ್ತಡದ ಮೇರೆಗೆ ವಿನಾಕಾರಣ ಪಿಎಫ್‌ಐ ಜಿಲ್ಲಾಧ್ಯಕ್ಷ ಹಾಶಿಂ ಶರೀಫ್‌ರನ್ನು ಬಂಧಿಸಲಾಗಿದ್ದು, ಇದರಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ನ ಷಡ್ಯಂತ್ರವಿದೆ. ಜನಪರ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ನಮ್ಮ ಸಂಘಟನೆಯು ಸೈದ್ದಾಂತಿಕವಾಗಿ ಸಂಘಪರಿವಾರವನ್ನು ವಿರೋಧಿಸುತ್ತಿದೆ ಎಂಬ ಕಾರಣಕ್ಕೆ ಕೋಮುವಾದಿಗಳು ಸಂಘಟನೆಂು ಹೆಸರು ಬಳಸಿಕೊಂಡು ಹತ್ಯೆಯ ತನಿಖೆಯ ಹಾದಿ ತಪ್ಪಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.
ಎಸ್‌ಡಿಪಿಐ ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಘಟನೆಯ ಬಗ್ಗೆ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ಸಮರ್ಪಕ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು. ಸುಳ್ಳು ಆರೋಪ ಹೊರಿಸಿ ಸಂಘಟನೆಯ ಮುಖಂಡರನ್ನು ಬಂಧಿಸಿರುವುದು ಖಂಡನೀಯ. ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಧರಣಿಯಲ್ಲಿ ಪಿಎಫ್‌ಐ ಪುತ್ತೂರು ವಲಯ ಅಧ್ಯಕ್ಷ ಸಂಶುದ್ದೀನ್, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಅರಿಯಡ್ಕ, ಉಮ್ಮರ್ ಸುಳ್ಯ, ಅಶ್ರಫ್ ಬಾವು ಪುತ್ತೂರು, ಅಝೀಝ್ ಕಬಕ, ಖಾದರ್ ಪುತ್ತೂರು, ಶಮೀರ್ ಮುರ, ಶರೀಫ್ ಕಟ್ಟತ್ತಾರು, ಎಂ.ಎಸ್.ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.