×
Ad

ಉಡುಪಿ: ಪಿಎಫ್‌ಐ ಮುಖಂಡನ ಬಂಧನ ಖಂಡಿಸಿ ಧರಣಿ

Update: 2016-11-03 19:59 IST

ಉಡುಪಿ, ನ.3: ಬೆಂಗಳೂರು ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆಗೆ ಸಂಬಂಧಿಸಿದಂತೆ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಬೆಂಗಳೂರು ಜಿಲ್ಲಾಧ್ಯಕ್ಷ ಹಾಶಿಮ್ ಶರೀಫ್‌ರನ್ನು ಬಂಧಿಸಿರುವುದನ್ನು ಖಂಡಿಸಿ ಪಿಎಫ್‌ಐನ ಉಡುಪಿ ಜಿಲ್ಲಾ ಸಮಿತಿ ಇಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಕ್ಲಾಕ್‌ಟವರ್ ಎದುರು ಪ್ರತಿಭಟನೆ ನಡೆಸಿತು.

ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯ ಮೊದಲ ದಿನದಿಂದಲೇ ಬಿಜೆಪಿ ಹಾಗೂ ಆರೆಸ್ಸೆಸ್, ಪ್ರಕರಣವನ್ನು ಪಿಎಫ್‌ಐನೊಂದಿಗೆ ಜೋಡಿಸಲು ಪ್ರತಿಭಟನೆ ಹಾಗೂ ಪತ್ರಿಕಾ ಹೇಳಿಕೆಗಳ ಮೂಲಕ ಒತ್ತಡ ಹೇರುತ್ತಿದ್ದು, ಇದೀಗ ಒತ್ತಡ ಹಾಗೂ ಷಡ್ಯಂತ್ರದ ಭಾಗವಾಗಿ ಪಿಎಫ್‌ಐನ ಬೆಂಗಳೂರು ಜಿಲ್ಲಾದ್ಯಕ್ಷರನ್ನು ಪೊಲೀಸರು ಸುಳ್ಳು ಆರೋಪದಡಿ ಬಂಧಿಸಿದ್ದಾರೆ ಎಂದು ಧರಣಿನಿರತರು ಆರೋಪಿಸಿದರು.

ಕಳೆದ ಹಲವಾರು ವರ್ಷಗಳಿಂದ ಜನಪರ ಸಾಮಾಜಿಕ ಚಳುವಳಿಯನ್ನು ತೊಡಗಿಸಿಕೊಂಡಿರುವ ಸಂಘಟನೆ, ಸೈದ್ಧಾಂತಿಕವಾಗಿ ಸಂಘಪರಿವಾರವನ್ನು ವಿರೋಧಿಸುತ್ತಿದೆ ಎಂಬ ಕಾರಣಕ್ಕಾಗಿ ಕೆಲವು ಕೋಮುವಾದಿ ಹಿತಾಸಕ್ತಿಗಳು, ವಿನಾಕಾರಣ ಈ ಹತ್ಯೆಯಲ್ಲಿ ಸಂಘಟನೆಯ ಪಾತ್ರವಿದೆ ಎಂದು ಆರೋಪಿಸುತ್ತಿದೆ ಎಂದು ಹೇಳಿದರು.

ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಮಂಜುನಾಥ್ ಕೊಲೆ, ಬಂಟಾಳ್ವದಲ್ಲಿ ಹರೀಶ್ ಪೂಜಾರಿ ಕೊಲೆ ಕೃತ್ಯದಲ್ಲೂ ಪಿಎಫ್‌ಐ ಕೈವಾಡವಿದೆ ಎಂದು ಹುಯಿಲೆಬ್ಬಿಸಲಾಯಿತು. ತನಿಖೆಯಲ್ಲಿ ಬೇರೆಯೇ ಚಿತ್ರ ಮೂಡಿಬಂತು ಎಂದವರು ಹೇಳಿದರು.

ರುದ್ರೇಶ್ ಕೊಲೆಯಲ್ಲಿ ಪಿಎಫ್‌ಐ ಕೈವಾಡವಿದೆ ಎಂದು ಆರೋಪಿಸಿ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸುವ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು, ಪ್ರವೀಣ್ ಪೂಜಾರಿ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಸಂಘಪರಿವಾರವನ್ನು ನಿಷೇಧಿಸಲು ಯಾಕೆ ಒತ್ತಾಯಿಸಿಲ್ಲ ಎಂದವರು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ವಿನಾಕಾರಣ ಪಿಎಫ್‌ಐ ಸಂಘಟನೆಯನ್ನು ಎಳೆದು ತಂದಿದ್ದು, ಇದರ ವಿರುದ್ಧ ಸಂಘಟನೆ ಕಾನೂನು ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಿದೆ ಎಂದು ಪ್ರತಿಭಟನಕಾರರು ಹೇಳಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಪಿಎಫ್‌ಐ ಜಿಲ್ಲಾಧ್ಯಕ್ಷ ಪಝೀಲ್ ಅಹ್ಮದ್, ಕಾರ್ಯದರ್ಶಿ ಮಹಮ್ಮದ್ ಆಲಂ ಬ್ರಹ್ಮಾವರ ಹಾಗೂ ಎಸ್‌ಡಿಪಿಐನ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News