ಸಂಪೂರ್ಣ ದೇಶ ಆಹಾರ ಭದ್ರತಾ ಕಾಯ್ದೆಯ ತೆಕ್ಕೆಗೆ: ಪಾಸ್ವಾನ್

Update: 2016-11-03 14:35 GMT

ಹೊಸದಿಲ್ಲಿ, ನ.3: ಕೇರಳ ಹಾಗೂ ತಮಿಳುನಾಡು ರಾಜ್ಯಗಳು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸುವುದರೊಂದಿಗೆ, ಈ ತಿಂಗಳಿಂದ ಇಡೀ ದೇಶವೇ ರೂ. 1.4 ಲಕ್ಷ ಕೋಟಿ ವಾರ್ಷಿಕ ಸಬ್ಸಿಡಿ ಪಡೆಯಲು ಅರ್ಹವಾಗುವ ಈ ಕಾನೂನಿನ ವ್ಯಾಪ್ತಿಗೆ ಬಂದಂತಾಗಿದೆಯೆಂದು ಸರಕಾರವಿಂದು ಹೇಳಿದೆ.


36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 80 ಕೋಟಿ ಮಂದಿ ಈ ಕಾಯ್ದೆಯ ವ್ಯಾಪ್ತಿಗೆ ಬಂದಿದ್ದಾರೆ.
ತಾವು ಅಧಿಕಾರ ವಹಿಸಿಕೊಂಡಾಗ ಕೇವಲ 11 ರಾಜ್ಯಗಳಲ್ಲಷ್ಟೇ ಆಹಾರ ಭದ್ರತಾ ಕಾಯ್ದೆ ಜಾರಿಯಲ್ಲಿತ್ತು. ಈ ಕಾಯ್ದೆಯು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾವಾಗುತ್ತಿದೆಯೆಂದು ತಿಳಿಸಲು ತಾನು ಸಂತೋಷಪಡುತ್ತಿದ್ದೇನೆಂದು ಕೇಂದ್ರ ಆಹಾರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

 ಕೇವಲ ಕೇರಳ ಹಾಗೂ ತಮಿಳುನಾಡುಗಳು ಮಾತ್ರ ಬಾಕಿಯಿದ್ದವು. ಅವು ಕೂಡ ನವೆಂಬರ್‌ನಿಂದ ಕಾಯ್ದೆಯನ್ನು ಜಾರಿಗೊಳಿಸಿವೆಯೆಂದು ಅವರು ಹೇಳಿದರು. 2013ರಲ್ಲಿ ಸಂಸತ್ತು ಅನುಮೋದಿಸಿದ್ದ ಈ ಕಾಯ್ದೆಯನ್ವಯ ಸರಕಾರವು ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಕಿ.ಗ್ರಾಂಗೆ ರೂ. 1-3ರಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಿದೆ.
ಇದಕ್ಕೆ ತಗಲುವ ಸಬ್ಸಿಡಿ ವೆಚ್ಚ ತಿಂಗಳಿಗೆ ರೂ. 11,726 ಕೋಟಿ ಅಥವಾ ವರ್ಷಕ್ಕೆ ರೂ. 1,40,700 ಕೋಟಿಯಾಗಿದೆಯೆಂದು ಪಾಸ್ವಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News