ಬಿ.ಸಿ.ರೋಡ್: ಪಿಎಫ್‌ಐ ಮುಖಂಡನ ಬಂಧನ ಖಂಡಿಸಿ ಧರಣಿ
ಬಂಟ್ವಾಳ, ನ. 3: ಬೆಂಗಳೂರು ಶಿವಾಜಿನಗರದ ಬಳಿ ಇತ್ತೀಚೆಗೆ ನಡೆದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಹಾಶಿಂ ಶರೀಫ್‌ರನ್ನು ಬಂಧಿಸಿರುವುದನ್ನು ಖಂಡಿಸಿ ಪಿಎಫ್‌ಐ ಬಂಟ್ವಾಳ ಘಟಕದ ವತಿಯಿಂದ ಬಿ.ಸಿ.ರೋಡ್ ಮೇಲ್ಸೇತುವೆ ಬಳಿ ಗುರುವಾರ ಸಂಜೆ ಧರಣಿ ನಡೆಯಿತು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ಆರೆಸ್ಸೆಸ್ ಕಾರ್ಯಕರ್ತನ ಕೊಲೆ ನಡೆದಿದೆ ಎಂದು ಪೊಲೀಸರೇ ಬಹಿರಂಗಪಡಿಸಿದ್ದರೂ ಹಾಶಿಂ ಶರೀಫ್‌ರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿ ತನಿಖೆಯ ಹಾದಿ ತಪ್ಪಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಹಿಂದೆ ಕೂಡಾ ಹಲವಾರು ಘಟನೆಗಳಲ್ಲಿ ಸಂಘಪರಿವಾರದ ಸಂಘಟನೆಗಳು ಇದೇ ಮಾದರಿಯ ಷಡ್ಯಂತ್ರಗಳನ್ನು ರೂಪಿಸಿ ವಿಫಲವಾಗಿರುವುದಕ್ಕೆ ಹಲವು ನಿದರ್ಶನಗಳಿವೆ ಎಂದು ಧರಣಿನಿರತರು ತಿಳಿಸಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ವಿನಾ ಕಾರಣ ಪಿಎಫ್‌ಐ ಸಂಘಟನೆಯನ್ನು ಎಳೆದು ತರಲಾಗಿದ್ದು ಬಂಧಿಸಲಾಗಿರುವ ಅಮಾಯಕ ಹಾಶಿಂ ಶರೀಫ್‌ರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ತನಿಖೆಯ ಹಾದಿ ತಪ್ಪಿಸಿ ಘಟನೆಯ ಲಾಭ ಪಡೆಯಲು ಮತ್ತು ಅಶಾಂತಿಯ ವಾತಾವರಣ ಸೃಷ್ಟಿಸಿ ಗಲಭೆಗೆ ಪ್ರಚೋದಿಸುತ್ತಿರುವ ಬಿಜೆಪಿ, ಸಂಘಪರಿವಾರದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಗೋಳ್ತಮಜಲು, ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಸಲೀಂ ಕುಂಪನಮಜಲು, ಕಾರ್ಯದರ್ಶಿ ಇಝಾಝ್ ಅಹ್ಮದ್ ಪಾಣೆಮಂಗಳೂರು, ಮುಖಂಡ ಶಬೀರ್ ಶಾಂತಿಅಂಗಡಿ ಮೊದಲಾದವರು ಉಪಸ್ಥಿತರಿದ್ದರು.