ಬಾಂಗ್ಲಾದೇಶಕ್ಕೆ ಚಂಡಮಾರುತ ಭೀತಿ

Update: 2016-11-03 14:42 GMT

ಹೊಸದಿಲ್ಲಿ, ನ.3: ಬಾಂಗ್ಲಾ ದೇಶಕ್ಕೆ ಅಪ್ಪಳಿಸುವ ಮುನ್ಸೂಚನೆಯಿರುವ ಚಂಡಮಾರುತದಿಂದಾಗಿ ಮುಂದಿನ 2-3 ದಿನಗಳ ಕಾಲ ಈಶಾನ್ಯ ರಾಜ್ಯಗಳು, ಪಶ್ಚಿಮಬಂಗಾಳ, ಒಡಿಶಾ ಹಾಗೂ ಆಂಧ್ರಪ್ರದೇಶಗಳಲ್ಲಿ ಭಾರಿಯಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆಯೆಂದು ಹವಾಮಾನ ಕಚೇರಿ ಇಂದು ಹೇಳಿದೆ.
ವಾಯುಭಾರ ಕುಸಿತದ ಪ್ರಾಥಮಿಕ ಹಂತದಲ್ಲಿರುವ ಈ ಚಂಡಮಾರುತವು ಪ್ರಕೃತ ವಿಶಾಖಪಟ್ಟಣದ ದಕ್ಷಿಣ-ಆಗ್ನೇಯದ 530 ಕಿ.ಮೀ., ಪಾರಾದೀಪ್‌ನ ದಕ್ಷಿಣ-ನೈಋತ್ಯದ 730 ಕಿ.ಮೀ. ಹಾಗೂ ಖೇಪುಪಾರದ(ಬಾಂಗ್ಲಾದೇಶ) ದಕ್ಷಿಣ-ನೈಋತ್ಯದ 1020 ಕಿ.ಮೀ. ದೂರದಲ್ಲಿ ಕೇಂದ್ರೀಕರಿಸಿದೆ.


ಈ ವ್ಯವಸ್ಥೆಯು ಮುಂದಿನ 24 ತಾಸುಗಳಲ್ಲಿ ಮೊದಲು ವಾಯವ್ಯದತ್ತ ಹಾಗೂ ಬಳಿಕ ತಿರುವು ಪಡೆದು ಮುಂದಿನ 48 ತಾಸುಗಳಲ್ಲಿ ಈಶಾನ್ಯ ದಿಕ್ಕಿನಲ್ಲಿ ಬಾಂಗ್ಲಾ ದೇಶದ ಕರಾವಳಿಯತ್ತ ಚಲಿಸುವ ಭಾರೀ ಸಾಧ್ಯತೆಯಿದೆ. ಮುಂದಿನ 24 ತಾಸುಗಳಲ್ಲಿ ಅದು ಭಾರೀ ವಾಯುಭಾರ ಕುಸಿತವಾಗಿ ತೀವ್ರಗೊಂಡು ಬಳಿಕ ಚಂಡಮಾರುತದ ರೂಪ ಪಡೆಯಲಿದೆಯೆಂದು ಭಾರತೀಯ ಹವಾಮಾನ ಇಲಾಖೆಯ ಚಂಡಮಾರುತ ಮುನ್ನೆಚ್ಚರಿಕೆ ವಿಭಾಗದ ಮುಖ್ಯಸ್ಥ ಎಂ. ಮಹಾಪಾತ್ರ ತಿಳಿಸಿದ್ದಾರೆ.


ಇದು 10 ದಿನಗಳಿಗೂ ಕಡಿಮೆ ಅವಧಿಯೊಳಗೆ ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ 2ನೆ ಚಂಡಮಾರುತವಾಗಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ‘ಕ್ಯಾಂಟ್’ ಚಂಡಮಾರುತ ಉಂಟಾಗಿದ್ದರೂ ಅದು ನೆಲಕ್ಕಪ್ಪಳಿಸಿರಲಿಲ್ಲ.


ಒಡಿಶಾ ಕರಾವಳಿಯ ಹಲವು ಭಾಗಗಳಲ್ಲಿ ಹಾಗೂ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ನ.4ರಿಂದ 6ರ ವರೆಗೆ ಲಘುವಿನಿಂದ ಸಾಧಾರಣ ಮಳೆಯಾಗಬಹುದು. ಮಣಿಪುರ, ಮಿರೆರಾಂ ಹಾಗೂ ತ್ರಿಪುರಗಳ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ನ.5ರಂದು ಭಾರೀ ಮಳೆಯಾಗುವ ಸಂಭವವಿದೆಯೆಂದು ಹವಾಮಾನ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News