ಮೂಡುಬೆಳ್ಳೆ ಚರ್ಚ್‌ನ ನವೀಕೃತ ಸ್ಮಶಾನ ಉದ್ಘಾಟನೆ
ಉಡುಪಿ, ನ.3: ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚಿನ ನವೀಕೃತ ರುದ್ರಭೂಮಿ (ಸ್ಮಶಾನ)ಯ ಉದ್ಘಾಟನೆ ಬುಧವಾರ ಜರಗಿತು. ಮಾಜಿ ಸಚಿವ, ಕಾಪು ಶಾಸಕ ವಿನಯಕುಮಾರ್ ಸೊರಕೆ ನವೀಕೃತ ಸ್ಮಶಾನವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೈಂಟ್ ಲಾರೆನ್ಸ್ ವಿದ್ಯಾಸಂಸ್ಥೆ ಗಳು ಸಮಾಜಕ್ಕೆ ನೀಡುತ್ತಿರುವ ಶೈಕ್ಷಣಿಕ ಸೇವೆಯನ್ನು ಶ್ಲಾಘಿಸಿ ಮೂಡುಬೆಳ್ಳೆ- ಕಾರ್ಕಳ- ಮಣಿಪುರ ಸಂಪರ್ಕ ರಸ್ತೆಯ ಅಗಲಿಕರಣ ಕಾರ್ಯ ಶೀಘ್ರವೇ ಕೈಗೆತ್ತಿ ಕೊಳ್ಳಲಾಗುವುದು ಎಂದರು.
ಪವಿತ್ರ ಬಲಿಪೂಜೆಯನ್ನು ನೇರವೇರಿಸಿ ಆಶೀರ್ವಚನ ನೀಡಿದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಸ್ಮಶಾನ ಎನ್ನುವುದು ಕ್ರೈಸ್ತ ಸಮುದಾಯಕ್ಕೆ ಚರ್ಚಿನ ಬಳಿಕ ಎರಡನೇ ಪವಿತ್ರ ಸ್ಥಳವಾಗಿದೆ. ಪ್ರತಿಯೊಂದು ಚರ್ಚ್‌ಗಳು ಸ್ಮಶಾನವನ್ನು ಉತ್ತಮವಾಗಿ ನಿರ್ವಹಣೆ ಮಾಡುವತ್ತ ಗಮನ ನೀಡಬೇಕು. ಕ್ರೈಸ್ತ ವಿಶ್ವಾಸಿಗಳು ಪ್ರತಿನಿತ್ಯ ಸ್ಮಶಾನಕ್ಕೆ ಭೇಟಿ ನೀಡಿ ಅಗಲಿದ ಆತ್ಮಗಳಿಗೆ ಪ್ರಾರ್ಥನೆ ಸಲ್ಲಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ನವೀಕೃತ ಸ್ಮಶಾನವನ್ನು ಧರ್ಮಾಧ್ಯಕ್ಷರು ಆಶೀರ್ವಚಿಸಿದರು. ನವೀಕೃತ ಸ್ಮಶಾನದ ದಾನಿಗಳನ್ನು, ಇಂಜಿನಿಯರ್‌ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚರ್ಚಿನ ಹಿಂದಿನ ಧರ್ಮಗುರುಗಳಾದ ವಂ.ವಲೇರಿಯನ್ ಡಿಸೋಜ, ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೇಸಾ, ಮೈನರ್ ಸೆಮಿನರಿ ಮೂಡುಬೆಳ್ಳೆಯ ಮುಖ್ಯಸ್ಥ ವಂ.ಅಲ್ಫೋನ್ಸಸ್ ಡಿಲೀಮಾ, ಚರ್ಚಿನ ಧರ್ಮಗುರು ವಂ. ಕ್ಲೇಮಂಟ್ ಮಸ್ಕರೇನ್ಹಸ್, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಇಂಜಿನಿಯರ್ ಎಲಿಯಾಸ್ ಡಿಸೋಜಾ ಉಪಸ್ಥಿತರಿದ್ದರು.
ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಅಲ್ಫೋನ್ಸ್ ಕೆ ಆಳ್ವ ಸ್ವಾಗತಿಸಿ, ಲತಾ ಡಿಮೆಲ್ಲೊ ವಂದಿಸಿದರು. ಮೀರಾ ಲೋಬೊ ಕಾರ್ಯಕ್ರಮ ನಿರೂಪಿಸಿದರು.