ತೀರ್ಪಿನ ಪ್ರತಿ ಒದಗಿಸದ ಬಾಂಬೆ ಹೈಕೋರ್ಟ್ ವಿರುದ್ಧ ಸುಪ್ರೀಂ ಅಸಮಾಧಾನ
ಹೊಸದಿಲ್ಲಿ, ನ.3: ಬಾಂಬೆ ಹೈಕೋರ್ಟ್ ನೀಡುತ್ತಿರುವ ಆದೇಶದ ಪ್ರತಿಗಳನ್ನು ಸಂಬಂಧಿಸಿದ ಕಕ್ಷಿಗಳಿಗೆ ಒದಗಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಮಧ್ಯಪ್ರವೇಶಿಸಿ ಏನಾದರೂ ಮಾಡಬಹುದೇ ಎಂದು ಪರಿಶೀಲಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿದೆ
ಆಸ್ತಿ ವಿವಾದವೊಂದರ ವಿಚಾರಣೆ ನಡೆಸುವ ವೇ:ಎ. ಬಾಂಬೆ ಹೈಕೋರ್ಟ್ ಆಗಸ್ಟ್‌ನಲ್ಲೇ ಆದೇಶ ನೀಡಿದ್ದರೂ ಅದರ ಪ್ರತಿಯನ್ನು ತಮಗೆ ನೀಡಿಲಿಲ್ಲವೆಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದಾಗ ಸುಪ್ರೀಂ ಕೋರ್ಟ್ ಈ ಟೀಕೆಯನ್ನು ಮಾಡಿದೆ.
ಬಾಂಬೆ ಹೈಕೋರ್ಟ್ ಮತ್ತೆ ಮತ್ತೆ ತೀರ್ಪುಗಳನ್ನು ನೀಡಿದರೂ ಅವುಗಳ ಪ್ರತಿಗಳನ್ನು ಕಕ್ಷಿದಾರರಿಗೆ ಒದಗಿಸದಿರುವುದು ತಮಗೆ ಅತೀವ ಅಸಂತೋಷವನ್ನು ಉಂಟುಮಾಡಿದೆ. ಇದನ್ನು ಪರಿಶೀಲಿಸಿ, ಏನಾದರೂ ಮಾಡಬಹುದೇ ಎಂಬುದನ್ನು ನಿರ್ಧರಿಸುವಂತೆ ತಾವು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ವಿನಂತಿಸುತ್ತಿದ್ದೇವೆಂದು ನ್ಯಾಯಮೂರ್ತಿಗಳಾದ ಎಂ.ಬಿ. ಲೋಕುರ್ ಹಾಗೂ ಆದರ್ಶ ಕುಮಾರ ಗೋಯಲ್‌ರನ್ನೊಳಗೊಂಡ ಪೀಠವೊಂದು ಹೇಳಿದೆ.
ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪೊಂದನ್ನು ಮೆ: ಗಡ ಪ್ರಾಪರ್ಟೀಸ್ ಪ್ರೈ. ಲಿ. ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್‌ನ ಆದೇಶದ ಪ್ರತಿಯನ್ನು ಒದಗಿಸುವಂತೆ ನ್ಯಾಯಪೀಠವು ಅರ್ಜಿದಾರರಿಗೆ ಈ ಹಿಂದೆಯೇ ಸೂಚಿಸಿದ್ದರೂ ಅದನ್ನು ಒದಗಿಸುವುದು ಸಾಧ್ಯವಾಗಿರಲಿಲ್ಲ.
ಪ್ರಮಾಣೀಕರಿಸದ ಅಥವಾ ಸರಳ ತೀರ್ಪಿನ ಪ್ರತಿಯಿಲ್ಲದೆಯೆ ಮೇಲ್ಮನವಿ ದಾಖಲಿಸಲು ಸಂಸ್ಥೆಗೆ ಅನುಮತಿ ನೀಡಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಹೈಕೋರ್ಟ್ ಆ.8ರಂದು ತೀರ್ಪು ನೀಡಿದೆ. ಆದಾಗ್ಯೂ, ಎರಡುವರೆ ತಿಂಗಳುಗಳ ಬಳಿಕವೂ ಆದೇಶದ ಪ್ರತಿ ಒದಗಿಸಿಲ್ಲವೆಂದು ಆಕ್ಷೇಪಿಸಿದೆ.