ಅರಣ್ಯ ನಿಗಮದ ಅಧ್ಯಕ್ಷ ಪದವಿ ತಿರಸ್ಕರಿಸಿದ ಗೋಪಾಲ ಪೂಜಾರಿ

Update: 2016-11-03 15:34 GMT

ಉಡುಪಿ, ನ.3: ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಿದ ಸರಕಾರದ ಪ್ರಸ್ತಾಪವನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ತಿರಸ್ಕರಿಸಿದ್ದಾರೆ.

ತನ್ನ ನಿರ್ಧಾರವನ್ನು ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈ ಅವರಿಗೆ ಖುದ್ದಾಗಿ ತಿಳಿಸಿದ್ದಾಗಿ ಗೋಪಾಲ್ ಪೂಜಾರಿ ಅವರು ಬೆಂಗಳೂರಿನಿಂದ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾದ, ಪಕ್ಷದ ಜಿಲ್ಲಾ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ ತನಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ತನ್ನ ಸಾಮರ್ಥ್ಯ ವನ್ನು ತೋರಲು ಅವಕಾಶವಿಲ್ಲದೇ, ಕೇವಲ ಕುರ್ಚಿ ಹಾಗೂ ಗೂಟದ ಕಾರಿಗಾಗಿ ನೀಡಿದ ಅಲಂಕಾರಿಕ ಹುದ್ದೆ ಬೇಡ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾಗಿ ಗೋಪಾಲ ಪೂಜಾರಿ ವಿವರಿಸಿದರು.

ಕಳೆದ ಸಚಿವ ಸಂಪುಟದ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಪೂಜಾರಿ, ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಉಡುಪಿಯ ಪ್ರಮೋದ್ ಮದ್ವರಾಜ್‌ರಿಂದ ಅವಕಾಶ ಕಳೆದುಕೊಂಡಿದ್ದರು. ಹಿರಿಯ ಶಾಸಕನಾಗಿರುವ ತನಗೆ ನೀಡಿರುವ ನಿಗಮದ ಬಗ್ಗೆ ಅವರಿಗೆ ಅಸಮಾಧಾನವಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಸಿಪಿಎಂಗೆ ನೈತಿಕತೆಯಿಲ್ಲ

ಕುಂದಾಪುರ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರಿನ ಹಿನ್ನೆಲೆಯಲ್ಲಿ ತನ್ನ ರಾಜಿನಾಮೆಯನ್ನು ಕೇಳುವ ನೈತಿಕತೆ ಸಿಪಿಎಂ ಪಕ್ಷಕ್ಕಿಲ್ಲ ಎಂದು ಗೋಪಾಲ ಪೂಜಾರಿ ಹೇಳಿದರು.

ಶಾಸಕನ ನೆಲೆಯಲ್ಲಿ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ನಾನಾಗಿದ್ದರೂ, ಅದಕ್ಕೆ ಗ್ರಾಮಲೆಕ್ಕಿಗ ಹಾಗೂ ತಹಶೀಲ್ದಾರ್‌ರು ನೀಡಿದ ವರದಿಯ ಆಧಾರದಲ್ಲಿ ಯಾರಿಗೇ ಆದರೂ ಭೂಮಿ ಮಂಜೂರು ಮಾಡುವ ಅಧಿಕಾರ ಮಾತ್ರವಿದೆ. ನಾವೇನು ಕ್ಷೇತ್ರಕ್ಕಿಳಿದು ನೀಡಿರುವ ವರದಿ ಸರಿಯೋ-ತಪ್ಪೊ ಎಂದು ತನಿಖೆ ಮಾಡಲು ಹೋಗುವುದಿಲ್ಲ ಎಂದು ಖಾರವಾಗಿ ನುಡಿದರು. ಅದು ಸಮಿತಿಯ ಕೆಲಸವೂ ಅಲ್ಲ ಎಂದರು.

ಈ ವಿಷಯದಲ್ಲಿ ನನ್ನ ರಾಜಿನಾಮೆ ಕೇಳುವ ಅದಿಕಾರವೇ ಸಿಪಿಎಂಗಿಲ್ಲ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ನಿವೇಶನದ ಹೆಸರಿನಲ್ಲಿ ಬಡಜನರಿಂದ ಹಣವನ್ನು ಸಂಗ್ರಹಿಸಿರುವ ಪಕ್ಷದ ನಾಯಕರು ಅದರ ಲೆಕ್ಕವನ್ನು ಮೊದಲು ನೀಡಲಿ ಎಂದವರು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News