×
Ad

ಕಣಿವೆಗೆ ಬಿದ್ದು ವ್ಯಕ್ತಿ ಗಾಯ

Update: 2016-11-04 00:09 IST

ಉಪ್ಪಿನಂಗಡಿ, ನ.3: ಮೂತ್ರಶಂಕೆಗೆಂದು ತೆರಳಿದ ಬಸ್ ಪ್ರಯಾಣಿಕನೋರ್ವರು ಆಯತಪ್ಪಿಆಳವಾದ ಕಣಿವೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸೊಂದು ರಾತ್ರಿ 11ರ ಸುಮಾರಿಗೆ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹೊಟೇಲೊಂದರ ಬಳಿ ನಿಂತಿದ್ದು, ಈ ಸಂದರ್ಭ ಬಸ್‌ನಲ್ಲಿದ್ದ ಪ್ರಯಾಣಿಕರೋರ್ವರು ಮೂತ್ರಶಂಕೆಗೆಂದು ಅಲ್ಲೇ ಕತ್ತಲಲ್ಲಿ ತೆರಳಿದ್ದರು. ಈ ಸಂದರ್ಭ ಅವರು ಸುಮಾರು 50ಅಡಿ ಆಳದ ಕಣಿವೆಯೊಂದರ ಬಳಿ ಅಳವಡಿಸಲಾಗಿದ್ದ ಕೇಬಲ್ ಪೈಪ್ ಮೇಲೆ ನಿಂತಿದ್ದು, ಅದು ಮುರಿದು ಹೋದ ಕಾರಣ ಅವರು ಕಣಿವೆಗೆ ಬಿದ್ದು ಗಂಭೀರ ಗಾಯಗೊಂಡು, ಪ್ರಜ್ಞ್ಞಾಹೀನರಾಗಿದ್ದರು ಎನ್ನಲಾಗಿದೆ. ಇದನ್ನು ಸಾರ್ವಜನಿಕರು ಗಮನಿಸಿದ್ದು, ತಕ್ಷಣವೇ ಅವರನ್ನು, ಮೇಲಕ್ಕೆತ್ತಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರಾದರೂ ಬರದ ಕಾರಣ ಸಂಚಾರಿ ಪೊಲೀಸರ ಜೀಪಲ್ಲೇ ಕರೆದುಕೊಂಡು ಹೋಗಲು ಒತ್ತಾಯಿಸಿದರು ಎಂದು ತಿಳಿದು ಬಂದಿದೆ. ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಪೊಲೀಸರು ತಮ್ಮ ಜೀಪಲ್ಲೇ ಗಾಯಾಳುವನ್ನು ಕರೆದುಕೊಂಡು ಪುತ್ತೂರಿಗೆ ತೆರಳಿದ್ದು, ಅಲ್ಲಿಂದ ಆ್ಯಂಬುಲೆನ್ಸ್ ನಲ್ಲಿ ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 45 ವರ್ಷ ಪ್ರಾಯದ ಈ ಗಾಯಾಳು ವ್ಯಕ್ತಿ ಬೆಂಗಳೂರು ಮೂಲದವರೆನ್ನಲಾಗಿದ್ದು, ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News