ಶಾಲೆಯಲ್ಲಿ ಬಾಕಿಯಾದ 1ನೆ ತರಗತಿ ವಿದ್ಯಾರ್ಥಿ
ಮಂಜೇಶ್ವರ, ನ.3: ಶಾಲಾ ಕ್ರೀಡಾ ಕೂಟಕ್ಕೆ ಹೋದ ಒಂದನೆ ತರಗತಿ ವಿದ್ಯಾರ್ಥಿಯನ್ನು ಬಿಟ್ಟು ಜತೆಗಿದ್ದವರು ಮರಳಿದ ಘಟನೆ ಮಂಜೇಶ್ವರ ಚೌಕಿಯಲ್ಲಿ ಬುಧವಾರ ಸಂಜೆ ನಡೆದಿದೆ. ಕತ್ತಲಾಗುತ್ತಾ ಬಂದರೂ ತನ್ನನ್ನು ಕರೆದೊಯ್ಯಲು ಯಾರೂ ಬರದಿರು ವುದನ್ನು ಗಮನಿಸಿದ ಬಾಲಕ ಕಿ.ಮೀ. ನಷ್ಟು ಏಕಾಂಗಿಯಾಗಿ ನಡೆದು ಬಂದು ಬಳಲಿದ್ದು, ಇದನ್ನರಿತ ನಾಗರಿಕರು ಸಮಯೋಚಿತವಾಗಿ ನಡೆಸಿದ ಕಾರ್ಯಾ ಚರಣೆ ಫಲವಾಗಿ ಬಾಲಕನನ್ನು ಹೆತ್ತವರಿ ಗೊಪ್ಪಿಸಲಾಯಿತು.
ಮಂಜೇಶ್ವರ ಚೌಕಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಲು ಕಯ್ಯರಿನ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯಾದ ಪೆರ್ಮುದೆ ನಿವಾಸಿ ನವೀನ್ ಎಂಬ ಬಾಲಕ ಹೋಗಿದ್ದನು. ಬೆಳಗ್ಗೆ ಶಾಲಾ ಬಸ್‌ನಲ್ಲಿ ಬಾಲಕ ಕ್ರೀಡಾಕೂಟ ನಡೆಯುವ ಶಾಲೆಗೆ ತೆರಳಿದ್ದನು ಎಂದು ತಿಳಿದು ಬಂದಿದೆ. ಸಂಜೆ ಬಸ್ ಮರಳಿ ಹೋಗುವಾಗ ಬಾಲಕ ನನ್ನು ಕರೆದೊಯ್ಯಲು ಜತೆಗಿದ್ದವರು ಮರೆತಿದ್ದಾರೆ. ಇದರಿಂದ ಶಾಲೆಯಲ್ಲೆ ಉಳಿದವಿದ್ಯಾರ್ಥಿ ಕತ್ತಲಾಗುತ್ತಾ ಬರುವುದ ರೊಂದಿಗೆ ಕರೆದೊಯ್ಯಲು ಯಾರೂ ಬಾರದ ಹಿನ್ನೆಲೆಯಲ್ಲಿ ತನ್ನ ಬ್ಯಾಗ್‌ನೊಂದಿಗೆ ಒಬ್ಬಂಟಿ ಯಾಗಿ ನಡೆದು ಉಪ್ಪಳಕ್ಕೆ ತಲುಪಿದನು ಎಂದು ತಿಳಿದು ಬಂದಿದೆ. ನಡೆದು ಬಳಲಿದ ಬಾಲಕ ಆಯಾಸ ಗೊಂಡು ಅಸ್ವಸ್ಥಗೊಂಡು ನಿಂತಿದ್ದನು ಎಂದು ತಿಳಿದು ಬಂದಿದೆ. ಬಾಲಕನ ಜತೆಗೆ ಯಾರೂ ಇಲ್ಲದಿರುವುದನ್ನು ಗಮನಿಸಿದ ನಾಗರಿಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯ ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ಕೇಳಿದಾಗ ಬಾಲಕನಿಗೆ ತಿಳಿಸಲು ಅಶಕ್ತನಾಗಿದ್ದನು. ಕೊನೆಗೆ ಬ್ಯಾಗ್‌ನಿಂದ ಡೈರೆಕ್ಟರಿ ತೆಗೆದುನೋಡಿದಾಗ ಮನೆಯ ದೂರವಾಣಿ ಸಂಖ್ಯೆ ಕಂಡು ಬಂದಿದೆ ಎನ್ನಲಾಗಿದೆ.
ಕೂಡಲೇ ಮನೆಗೆ ಕರೆಮಾಡಿ ಸ್ಥಳೀಯರು ತಿಳಿಸಿರೆನ್ನಲಾಗಿದೆ. ಇದೇ ವೇಳೆ ಬಾಲಕ ಮರಳಿ ಮನೆಗೆ ತಲುಪದ ಆತಂಕದಲ್ಲಿದ್ದ ಮನೆಯವರು ವಿಷಯ ತಿಳಿದು ವಾಹನದೊಂದಿಗೆ ಸ್ಥಳಕ್ಕೆ ತಲುಪಿದರು. ಸ್ವಲ್ಪ ಹೊತ್ತಿನಲ್ಲೇ ಶಾಲಾ ಅಧಿಕಾರಿಗಳೂ ಅಲ್ಲಿಗೆ ತಲುಪಿ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ವಿಷಯವನ್ನು ಬಗೆಹರಿಸಲಾಯಿತು ಎಂದು ತಿಳಿದು ಬಂದಿದೆ.