×
Ad

ಮೆಲ್ಕಾರ್: ಮನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

Update: 2016-11-04 11:26 IST

ಬಂಟ್ವಾಳ, ನ.4: ಮನೆಯೊಂದಕ್ಕೆ ಸುಲಭದಲ್ಲಿ ನುಗ್ಗಿದ ಕಳ್ಳರು ನಗ - ನಗದು ದೋಚಿ ಪರಾರಿಯಾಗಿರುವ ಘಟನೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಶುಕ್ರವಾರ ಮುಸುಕಿನ ಜಾವ ನಡೆದಿದೆ.

ಇಲ್ಲಿನ ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಕಪಾಟಿನಲ್ಲಿದ್ದ 24 ಪವನ್ ಚಿನ್ನ ಹಾಗೂ 14 ಸಾವಿರ ನಗದನ್ನು ದೊಚಿ ಪರಾರಿಯಾಗಿದ್ದಾರೆ.

ಮನೆಯ ಮೇಲಂತಸ್ತಿನಲ್ಲಿ ಟೈಲ್ಸ್ ಕೆಲಸ ನಡೆಯುತ್ತಿದ್ದು ಕೆಲಸಗಾರಿಗೆ ಹತ್ತಿಳಿಯಲು ಮನೆಯ ಹಿಂಭಾಗದಲ್ಲಿ ಏಣಿಯೊಂದನ್ನು ಇರಿಸಲಾಗಿತ್ತು. ಟೈಲ್ಸ್ ಕಾರ್ಮಿಕರು ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಮೇಲಂತಸ್ಥಿನ ಬಾಗಿಲನ್ನು ಹಾಕಿದ್ದರಾದರೂ ಬಳಿಕ ಮನೆ ಮಂದಿ ಬಾಗಿಲಿನ ಚಿಲಕ ಹಾಕಿರಲಿಲ್ಲ. ಇದನ್ನೇ ಸದುಪಯೋಗಪಡಿಸಿಕೊಂಡ ಕಳ್ಳರು ಈ ಏಣಿಯನ್ನು ಬಳಸಿಕೊಂಡು ಮೇಲಂತಸ್ತಿಗೆ ಹತ್ತಿ ಸುಲಭವಾಗಿಯೇ ಮನೆಯೊಳಗೆ ಪ್ರವೇಶಿಸಿದ್ದಾರೆ. ಬಳಿಕ ಒಳಗಿನಿಂದ ಕೆಳ ಹಂತಗೆ ಇಳಿದು ಬೆಡ್‌ರೂಂವೊಂದರ ಕಪಾಟ್‌ನಲ್ಲಿದ್ದ ಚಿನ್ನ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಚಿನ್ನ ಮತ್ತು ಹಣವಿದ್ದ ಕಪಾಟಿನ ಬಾಗಿಲು ಹಾಕಿತ್ತಾದರೂ ಬೀಗ ಹಾಕಿರಲಿಲ್ಲ. ಹೀಗಾಗಿ ಕಳ್ಳರು ಸುಲಭದಲ್ಲೇ ಚಿನ್ನ, ಹಣ ದೋಚುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಕುಟುಂಬಸ್ಥರು ಇದ್ದರಾದರೂ ಅವರೆಲ್ಲ ಬೇರೆ ಬೇರೆ ರೂಂನಲ್ಲಿ ಮಲಗಿದ್ದರು. ಕಳವಾದ ಚಿನ್ನ ಮತ್ತು ನಗದು ಇರಿಸಲಾಗಿದ್ದ ಕಪಾಟಿದ್ದ ಕೋಣೆಯಲ್ಲಿ ಯಾರು ಮಲಗಿರಲಿಲ್ಲ. ಹಾಗಾಗಿ ಕಳ್ಳರಿಗೆ ಇದು ವರದಾನವಾಗಿತ್ತು.

ಮನೆ ಮಂದಿ ಬೆಳಗ್ಗಿನ ಜಾವ ಎದ್ದಾಗ ಕಪಾಟಿನೊಳಗಿದ್ದ ಪರ್ಸ್ ಹಾಗೂ ಇತರ ಸಾಮಗ್ರಿಗಳು ನೆಲದ ಮೇಲೆ ಹರಿಡಿದ್ದು ಅನುಮಾನಗೊಂಡು ಕಪಾಟಿನ ಬಾಗಿಲು ತೆರದು ನೋಡಿದಾಗ ಚಿನ್ನಾಭರಣ ಹಾಗೂ ನಗದು ಕಳವಾಗಿರುವುದು ಬೆಳಕಿಗೆ ಬಂತು ಎಂದು ಮನೆಯವರು ತಿಳಿದ್ದಾರೆ.

ಸುದ್ದಿ ತಿಳಿದ ಬಂಟ್ವಾಳ ನಗರ ಠಾಣೆ ಅಪರಾಧ ವಿಭಾಗದ ಎಸ್ಸೈ ಗಂಗಾಧರ್ ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News