×
Ad

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ್ ಶೆಟ್ಟಿ ಅಧಿಕಾರ ಸ್ವೀಕಾರ

Update: 2016-11-04 17:20 IST

ಮಂಗಳೂರು, ನ.4: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷೆಯಾಗಿ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರ ಶಾಸಕಿ ಶಾರದಾ ಮೋಹನ್ ಶೆಟ್ಟಿ ಶುಕ್ರವಾರ ಮಂಗಳೂರಿನ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರದ ಅಭಿವೃದ್ಧಿಗೆ ಇನ್ನಷ್ಟು ಅನುದಾನದ ಅಗತ್ಯವಿದೆ ಎಂದರು. ಕರಾವಳಿಯ ಮೂರು ಜಿಲ್ಲೆಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಸ್ಥಳೀಯ ಸಮಸ್ಯೆಗಳಿಗೆ ಅನುಗುಣವಾಗಿ ಯೋಜನೆ ರೂಪಿಸುವ ಮೂಲಕ ಹಂತಹಂತವಾಗಿ ಬೆಳೆಯುತ್ತಿರುವ ಪ್ರಾಧಿಕಾರವನ್ನು ಮತ್ತಷ್ಟು ಸಶಕ್ತಗೊಳಿಸಬೇಕಿದೆ. ಇದಕ್ಕಾಗಿ ತಾನು ಹೋರಾಟ ಕೂಡಾ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಅಧ್ಯಕ್ಷರಾದ ನಿವೇದಿತ ಆಳ್ವಾರವರು ಮೀನುಗಾರಿಕೆ,ಕಾಲುಸಂಕ, ತೂಗುಸೇತುವೆಗಳಿಗೆ ಹೆಚ್ಚಿನ ಒತ್ತು ನೀಡಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಇದರ ಜತೆಯಲ್ಲೇ ಮುಂದೆ ಪ್ರವಾಸೋದ್ಯಮ, ಮೀನುಗಾರಿಕಾ ಜೆಟ್ಟಿ, ಬಂದರು ಜೆಟ್ಟಿಗಳ ದುರಸ್ತಿ ನಿರ್ವಹಣೆಗೆ ಮುಖ್ಯಮಂತ್ರಿ ಮೂಲಕ ಅನುದಾನ ತಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಕಳೆದ ಮೂರ್ನಾಲು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಪರಿಗಣಿಸಿ ಮುಖ್ಯಮಂತ್ರಿಯವರು ಪ್ರಾಧಿಕಾರದ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಮುಂದೆಯೂ ನಿರೀಕ್ಷೆಗಿಂತ ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಮಾಡುವ ಇರಾದೆ ಹೊಂದಿದ್ದು, ಪ್ರಾಧಿಕಾರ ವ್ಯಾಪ್ತಿಗೊಳಪಟ್ಟ ಅವಿಭಜಿತ ದ.ಕ. ಮತ್ತು ನೆರೆಯ ಉತ್ತರಕನ್ನಡ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ತಂದು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ದಿ ಕಾರ್ಯಗಳಿಗೆ ಬದ್ದವಾಗಿರುವುದಾಗಿ ತಿಳಿಸಿದರು.

ಶಾಸಕ ಜೆ.ಆರ್.ಲೋಬೋ ಮಾತನಾಡಿ, ಪ್ರಾಧಿಕಾರಕ್ಕೆ ಪರಿಸರ ಅಭಿಯಂತರ ನೇಮಕವಾಗಿದೆ. ಪ್ರಮುಖವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ನೇಮಕಾತಿ ಬಾಕಿಯಿದೆ. ವಿವಿಧ ಹಂತದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಹಂತಹಂತವಾಗಿ ಸಿಬ್ಬಂದಿಗಳ ನೇಮಕವಾಗಲಿದೆ ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭ ವಿವಿಧ ಜನಪ್ರತಿನಿಧಿಗಳು ಮತ್ತು ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News