ದೈಹಿಕ, ಮಾನಸಿಕವಾಗಿ ಸದೃಢರಾದಾಗ ಆರೋಗ್ಯಭಾಗ್ಯ: ಸಚಿವ ರಮಾನಾಥ ರೈ
ಬೆಳ್ತಂಗಡಿ, ನ.4: ದೈಹಿಕ ಮತ್ತು ಮಾನಸಿಕವಾಗಿ ನಾವು ಸದೃಢರಾದಾಗ ಮಾತ್ರ ಆರೋಗ್ಯಭಾಗ್ಯ ಹೊಂದಬಹುದು. ಅರಣ್ಯ ಇಲಾಖೆ ನೌಕರರು ಆರೋಗ್ಯ ಭಾಗ್ಯದೊಂದಿಗೆ ಕಾಡನ್ನೂ, ನಾಡನ್ನೂ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಂಗಳೂರು, ಶಿವಮೊಗ್ಗ ಮತ್ತು ಕೊಡಗು ಅರಣ್ಯ ವೃತ್ತಗಳ ಪ್ರಾದೇಶಿಕ ಅರಣ್ಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ರಾಜ್ಯದಲ್ಲಿ ಪ್ರಥಮವಾಗಿ ಕಳೆದ ವರ್ಷ ಅರಣ್ಯ ಇಲಾಖೆಗೆ ಕ್ರೀಡಾಪಟುಗಳನ್ನು ಆದ್ಯತೆಯ ನೆಲೆಯಲ್ಲಿ ನೇಮಕ ಮಾಡಲಾಗಿದೆ. ಈ ವರ್ಷ ಇತರ ಎರಡು ರಾಜ್ಯಗಳು ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿವೆ ಎಂದರು.
ಕಳೆದ ವರ್ಷ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ನೌಕರರ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸಿದ್ದು 200 ಅಂಕಗಳೊಂದಿಗೆ ಕರ್ನಾಟಕ ದೇಶದಲ್ಲೆ ಸಮಗ್ರ ತಂಡ ಪ್ರಶಸ್ತಿ ಪಡೆದಿತ್ತು. ಮುಂದಿನ ಜನವರಿ 7 ರಿಂದ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯದ ಅರಣ್ಯ ಇಲಾಖೆಯ ನೌಕರರು ಉತ್ತಮ ಸಾಧನೆ ಮಾಡಿ ಸಮಗ್ರ ತಂಡ ಪ್ರಶಸ್ತಿ ಗಳಿಸಬೇಕೆಂದು ಶುಭ ಹಾರೈಸಿದರು.
ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ. ಅನೂರ್ ರೆಡ್ಡಿ ಮಾತನಾಡಿ ಈಗ ಬಳ್ಳಾರಿ, ಬೆಂಗಳೂರು, ಶಿರಸಿ ಮತ್ತು ಹಾಸನದಲ್ಲಿ ವಲಯ ಮಟ್ಟದ ಕ್ರೀಡಾಕೂಟ ನಡೆಯುತ್ತಿದ್ದು ಎಲ್ಲಾ ನೌಕರರು ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ ಎಸ್. ಬಿಜ್ಜೂರ್ ಸ್ವಾಗತಿಸಿದರು. ಭಾಸ್ಕರ್ ವಂದಿಸಿದರು. ಸೋಮಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.