ಎಚ್‌ಐವಿ/ಏಡ್ಸ್ ಪೀಡಿತರಿಗೆ ವಿಮಾ ರಕ್ಷಣೆಗಾಗಿ ಹೈಕೋರ್ಟಿನಲ್ಲಿ ಮೊರೆ
ಹೊಸದಿಲ್ಲಿ,ನ.4: ಎಚ್‌ಐವಿ ಮತ್ತು ಏಡ್ಸ್ ಪೀಡಿತರಿಗೆ ಜೀವವಿಮೆ ಮತ್ತು ಆರೋಗ್ಯ ವಿಮಾ ರಕ್ಷಣೆಯ ಸೌಲಭ್ಯವನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗೆ ಉತ್ತರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಸರಕಾರಕ್ಕೆ ಸೂಚಿಸಿದೆ.
ಆರೋಗ್ಯ ಸಚಿವಾಲಯ,ಸರಕಾರಿ ಸ್ವಾಮ್ಯದ ವಿಮಾ ಕಂಪನಿಗಳು ಹಾಗೂ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎ)ಕ್ಕೆ ನೋಟಿಸುಗಳನ್ನು ಹೊರಡಿಸಿದ ಮುಖ್ಯ ನ್ಯಾಯಾಧೀಶೆ ಜಿ.ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಸೆಹಗಲ್ ಅವರ ಪೀಠವು ಮುಂದಿನ ವರ್ಷದ ಜ.17ರೊಳಗೆ ಈ ಪಿಐಎಲ್‌ಗೆ ಉತ್ತರಿಸುವಂತೆ ನಿರ್ದೇಶ ನೀಡಿದೆ. ಎಚ್‌ಐವಿ ಮತ್ತು ಏಡ್ಸ್‌ನೊಂದಿಗೆ ಬದುಕುತ್ತಿ ರುವವರ ವಿರುದ್ಧ ತಾರತಮ್ಯವನ್ನೆಸಗಲಾಗುತ್ತಿದೆ ಎಂದೂ ಅರ್ಜಿಯು ಆರೋಪಿಸಿದೆ.
ಎಚ್‌ಐವಿ ಮತ್ತು ಏಡ್ಸ್ ಪೀಡಿತರಿಗಾಗಿ ಯಾವುದೇ ವಿಮಾ ಪಾಲಿಸಿಗಳನ್ನು ಜಾರಿಗೊಳಿಸಲಾಗಿಲ್ಲ ಎಂದು ಆರೋಪಿಸಿರುವ ಅರ್ಜಿದಾರ ರಾಜೀವ್ ಶರ್ಮಾ ಅವರು, 2014,ಎ.1ರ ವೇಳೆಗೆ ಎಲ್ಲ ಎಚ್‌ಐವಿ ಮತ್ತು ಏಡ್ಸ್ ಪೀಡಿತರಿಗೆ ವಿಮಾ ರಕ್ಷಣೆ ದೊರೆಯಲಿದೆ ಎಂದು ಕೇಂದ್ರ ಸರಕಾರವು 2013ರಲ್ಲಿ ಹೇಳಿತ್ತು. ಆದರೆ ಈವರೆಗೆ ಏನೂ ಆಗಿಲ್ಲ ಎಂದು ಬೆಟ್ಟು ಮಾಡಿದ್ದಾರೆ.
ಎಚ್‌ಐವಿ ಮತ್ತು ಏಡ್ಸ್ ಪೀಡಿತರಿಗೆ ವೈದ್ಯಕೀಯ ವಿಮೆಯ ರಕ್ಷಣೆಯನ್ನು ಒದಗಿಸುವಂತೆ ಸೂಚಿಸಿ 2012ರಲ್ಲಿ ಐಆರ್‌ಡಿಎ ವಿಮಾ ಕಂಪನಿಗಳಿಗೆ ಮುಕ್ತ ಕರಡೊಂದನ್ನು ಹೊರಡಿಸಿತ್ತು ಎಂದೂ ಅವರು ಅರ್ಜಿಯಲ್ಲಿ ಹೇಳಿದ್ದಾರೆ.