ಎನ್‌ಡಿಟಿವಿ ನಿಷೇಧ ಹಿಂದೆಗೆಯುವಂತೆ ಪತ್ರಕರ್ತರ ಆಗ್ರಹ

Update: 2016-11-04 14:02 GMT

ಹೊಸದಿಲ್ಲಿ, ನ.4: ಎನ್‌ಡಿಟಿವಿ ಇಂಡಿಯಾದ ಮೇಲೆ ಸರಕಾರ ವಿಧಿಸಿರುವ ಒಂದು ದಿನದ ನಿಷೇಧವನ್ನು ಹಿರಿಯ ಪತ್ರಕರ್ತರು ಹಾಗೂ ಸುದ್ದಿ ಸಂಘಟನೆಗಳು ಬಹಿರಂಗವಾಗಿ ಖಂಡಿಸಿವೆ. ಇದನ್ನು ಅವರು ಮೂಲಭೂತ ಹಕ್ಕು ಹಾಗೂ ಪತ್ರಿಕಾ ಸ್ವಾತಂತ್ರವನ್ನು ದಮನಿಸಲಾಗಿದ್ದ ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ.

ಜನವರಿಯಲ್ಲಿ ನಡೆದಿದ್ದ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಸುದ್ದಿ ಪ್ರಸಾರದ ವೇಳೆ ‘ವ್ಯೆಹಾತ್ಮಕ ಸೂಕ್ಷ್ಮ ಮಾಹಿತಿಯನ್ನು’ ಎನ್‌ಡಿಟಿವಿ ಇಂಡಿಯಾ ಬಹಿರಂಗಪಡಿಸಿದೆಯೆಂದು ಸರಕಾರದ ಸಮಿತಿಯೊಂದು ತೀರ್ಮಾನಿಸಿದ ಬಳಿಕ, ನ.9ರಂದು ಪ್ರಸಾರ ಸ್ಥಗಿತಗೊಳಿಸುವಂತೆ ವಾಹಿನಿಗೆ ಆದೇಶಿಸಲಾಗಿದೆ.
ಈ ಆರೋಪವನ್ನು ಪ್ರಬಲವಾಗಿ ನಿರಾಕರಿಸಿದ ಎನ್‌ಡಿಟಿವಿ, ‘ಎಲ್ಲ ಹಾದಿಗಳನ್ನು’ ಪರಿಶೀಲಿಸುತ್ತಿದೆ.

ಪತ್ರಿಕಾ ಸ್ವಾತಂತ್ರವನ್ನು ದಮನಿಸಲಾಗಿದ್ದ ತುರ್ತು ಸ್ಥಿತಿಯ ಕರಾಳ ದಿನಗಳ ಬಳಿಕ, ಎನ್‌ಡಿಟಿವಿಯ ವಿರುದ್ಧ ಇಂತಹ ಆದೇಶ ಅಸಾಮಾನ್ಯವಾದುದಾಗಿದೆ. ಪ್ರತಿ ವಾಹಿನಿ ಹಾಗೂ ಪತ್ರಿಕೆಗಳು ಇದೇ ರಿತಿಯ ವಾರ್ತೆ ಪ್ರಸಾರ ಮಾಡಿವೆಯೆಂದು ಎನ್‌ಡಿಟಿವಿ ಹೇಳಿಕೆಯೊಂದರಲ್ಲಿ ಪ್ರತಿಪಾದಿಸಿದೆ.

ವಾಹಿನಿಯು ಮಹತ್ವದ ಭದ್ರತಾ ಘಟನೆಗಳ ವೇಳೆ ಮಾಧ್ಯಮಗಳು ವರದಿ ಮಾಡಬಹುದಾದ ಮಿತಿಯನ್ನು ನಿಗದಿಪಡಿಸುವ ಕೇಬಲ್ ಟಿವಿ ಕಾಯ್ದೆಯನ್ನು ಉಲ್ಲಂಘಿಸಿದೆ. ಅದರಿಂದಾಗಿ ಅದು ಒಂದು ದಿನ ಕಾರ್ಯಾಚರಣೆ ಸ್ಥಗಿತಗೊಳಿಸಲೇಬೇಕೆಂದು ಮಾಹಿತಿ ಸಚಿವಾಲಯದ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವಾಹಿನಿಯು ಒಂದು ದಿನದ ಪ್ರಸಾರ ನಿಲ್ಲಿಸಬೇಕೆಂಬ ಆದೇಶವು ಮಾಧ್ಯಮ ಸ್ವಾತಂತ್ರದ ನೇರ ಉಲ್ಲಂಘನೆಯಾಗಿದೆ. ಅದರಿಂದಾಗಿ ಅದು ಭಾರತದ ನಾಗರಿಕರ ಉಲ್ಲಂಘನೆಯೂ ಆಗಿದೆ. ಇದು ತುರ್ತು ಪರಿಸ್ಥಿತಿಯ ವೇಳೆ ಸರಕಾರ ಹೇರಿದ್ದ ಕಠಿನ ಸೆನ್ಸಾರ್‌ಶಿಪ್‌ಗೆ ಸಮವಾಗಿದೆಯೆಂದು ಹೇಳಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ನಿಷೇಧಾಜ್ಞೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದೆ.

ಬೇಜವಾನ್ದಾರಿಯ ಮಾಧ್ಯಮ ಪ್ರಸಾರಕ್ಕಾಗಿ ಸಂಸ್ಥೆಯೊಂದನ್ನು ನ್ಯಾಯಾಲಯಕ್ಕೆಳೆಯುವ ಆಯ್ಕೆ ಸರಕಾರಕ್ಕಿದೆ. ಆದರೆ, ಸರಕಾರವನ್ನು ಟೀಕಿಸುತ್ತ ಬಂದಿರುವ ಹಾಗೂ ಜನ ಸಾಮಾನ್ಯರಿಗಾಗಿ ಸ್ಥಳದಿಂದಲೇ ಸುದ್ದಿಯ ಗಂಭೀರ ನೇರ ಪ್ರಸಾರ ಮಾಡಿರುವ ವಾಹಿನಿಯ ಮೇಲೆ ಹೇರಿರುವ ನಿಷೇಧ ದೇಶದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸಮ್ಮತವಾಗದೆಂದು 2,500ಕ್ಕೂ ಹೆಚ್ಚು ಪತ್ರಕರ್ತರನ್ನು ಪ್ರತಿನಿಧಿಸುತ್ತಿರುವ ಮುಂಬೈ ಪ್ರೆಸ್ ಕ್ಲಬ್ ಹೇಳಿದೆ.

‘ಗಡಿ ರಹಿತ ವರದಿಗಾರರು’ 2016ರಲ್ಲಿ ಬಿಡುಗಡೆಗೊಳಿಸಿರುವ ಇತ್ತೀಚಿನ ವಾರ್ಷಿಕ ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ 180 ದೇಶಗಳೊಳಗೆ 133ನೆ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News