ನ.15ರಂದು ಪೆಟ್ರೋಲ್ ಪಂಪ್ ಮುಷ್ಕರ ಸಾಧ್ಯತೆ
ಹೈದರಾಬಾದ್, ನ.4: ನಿನ್ನೆಯಿಂದ 2 ದಿನಗಳ ‘ಖರೀದಿಯಿಲ್ಲ’ ಮುಷ್ಕರ ನಡೆಸುತ್ತಿರುವ ದೇಶಾದ್ಯಂತದ ಪೆಟ್ರೋಲಿಯಂ ಮಾರಾಟಗಾರರು, ಕಮಿಷನ್ ಹೆಚ್ಚಿಸಬೇಕೆಂಬ ತಮ್ಮ ಬೇಡಿಕೆಯನ್ನು ಮುಂದಿಟ್ಟು ನ.15ರಂದು ಪೂರ್ಣ ಪ್ರಮಾಣದ ಮುಷ್ಕರ ನಡೆಸುವ ಬೆದರಿಕೆ ಹಾಕಿದ್ದಾರೆ.
ಇದಲ್ಲದೆ, ಪೆಟ್ರೋಲ್ ಪಂಪ್‌ಗಳು ನಾಳೆಯಿಂದ ಮಿತ ಅವಧಿಗಷ್ಟೇ ಇಂಧನವನ್ನು ಮಾರಲಿವೆ ಹಾಗೂ ರವಿವಾರಗಳಂದು ಹಾಗೂ ಯಾವುದೇ ಸರಕಾರಿ ರಜೆಯಂದು ಕಾರ್ಯಾಚರಿಸುವುದಿಲ್ಲವೆಂದು ಭಾರತದ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟ (ಸಿಐಪಿಡಿ) ಪ್ರಕಟಿಸಿದೆ.
ತೈಲ ಸಂಸ್ಥೆಗಳು ತಮ್ಮ ಬೇಡಿಕೆಗೆ ಕಿವಿಗೊಡದಿದ್ದಲ್ಲಿ ದೇಶಾದ್ಯಂತದ ಎಲ್ಲ 54 ಸಾವಿರ ಪೆಟ್ರೋಲ್ ಪಂಪ್‌ಗಳು ನ.15ರಂರು ಒಂದು ದಿನದ ಮುಷ್ಕರ ನಡೆಸಲಿದೆಯೆಂದು ಸಿಐಪಿಡಿಯ ಜಂಟಿ ಕಾರ್ಯದರ್ಶಿ ರಾಜೀವ್ ಅಮರಂ ತಿಳಿಸಿದ್ದಾರೆ.
ನಿನ್ನೆ ಹಾಗೂ ಇಂದು ತೆಲಂಗಾಣ ಒಂದರಲ್ಲೇ 1,400ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ಬಂದಿದ್ದ ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ರಾಜ್ಯದ ಪೆಟ್ರೋಲಿಯಂ ಮಾರಾಟಗಾರರು ಇಳಿಸಿಕೊಂಡಿಲ್ಲ. ನಿನ್ನೆ ಹಾಗೂ ಇಂದು ಪೆಟ್ರೋಲಿಯಂ ಖರೀದಿ ನಿಲ್ಲಿಸಿದ್ದೆವು. ನಾಳೆಯಿಂದ ತಾವು ಪೆಟ್ರೋಲ್, ಡೀಸೆಲ್ ಅಥವಾ ಇನ್ನಿತರ ಉತ್ಪಾದನೆಗಳನ್ನು ಸರಕಾರಿ ಕಚೇರಿಗಳ ಸಮಯದಂತೆ ಬೆಳಗ್ಗೆ 9ರಿಂದ ಸಂಜೆ 6ಗಂಟೆಯ ವರೆಗೆ ಮಾತ್ರವೇ ಮಾರಲಿದ್ದೇವೆ.
ರವಿವಾರ ಹಾಗೂ ಸರಕಾರಿ ರಜಾ ದಿನಗಳಂದು ಇಂಧನ ಮಾರಾಟ ಮಾಡುವುದಿಲ್ಲ. ಸರಕಾರ ತಮ್ಮ ಬೇಡಿಕೆಗಳನ್ನು ಆಲಿಸದಿದ್ದಲ್ಲಿ ನ.15ರಂದು ಮುಷ್ಕರಕ್ಕೆ ಕರೆ ನೀಡಲಿದ್ದೇವೆಂದು ಅಮರಂ ಹೇಳಿದ್ದಾರೆ.