×
Ad

ಯುಪಿಸಿಎಲ್ ಯೋಜನೆಯ ಸಮಸ್ಯೆಗಳ ಕುರಿತು ರಾಜ್ಯ ಮೇಲ್ಮನವಿ ಪ್ರಾಧಿಕಾರ ಸಮಿತಿಯಿಂದ ಪರಿಶೀಲನೆ

Update: 2016-11-04 21:07 IST

ಉಡುಪಿ, ನ.4: ಪಡುಬಿದ್ರಿ ಸಮೀಪದ ಎಲ್ಲೂರು ಆಸುಪಾಸಿನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅದಾನಿ ಕಂಪೆನಿ ಮಾಲಕತ್ವದ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಿಂದ ಪರಿಸರದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗಿರುವ ಕುರಿತು ಪರಿಶೀಲಿಸಿ ವರದಿ ನೀಡಲು ಕರ್ನಾಟಕ ರಾಜ್ಯ ಮೇಲ್ಮನವಿ ಪ್ರಾಧಿಕಾರ (ಕರ್ನಾಟಕ ಸ್ಟೇಟ್ ಅಪಿಲಿಯೇಟ್ ಅಥಾರಿಟಿ)ಯ ಪರಿಸರ ಸಮಿತಿ ಇಂದು ಭೇಟಿ ನೀಡಿತು.

ಯುಪಿಸಿಎಲ್ ವಿರುದ್ಧ ಆರಂಭದಿಂದಲೂ ಹೋರಾಟ ನಡೆಸಿಕೊಂಡು ಬಂದಿರುವ ನಂದಿಕೂರು ಜನಜಾಗೃತಿ ಸಮಿತಿ 2012ರಲ್ಲಿ ನೀಡಿದ ದೂರಿನಂತೆ ಮೇಲ್ಮನವಿ ಪ್ರಾಧಿಕಾರದ ಮೂವರು ಸದಸ್ಯರ ಪರಿಸರ ಸಮಿತಿ ಇದೀಗ ಇಲ್ಲಿನ ಸಮಸ್ಯೆಗಳು, ಇದರಿಂದ ಜನರಿಗಾಗುತ್ತಿರುವ ತೊಂದರೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿಯೊಂದನ್ನು ಪ್ರಾಧಿಕಾರಕ್ಕೆ ಒಪ್ಪಿಸಲಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅಜಿತ್ ಗುಂಜಾಲ್ ನೇತೃತ್ವದ ಸಮಿತಿಯಲ್ಲಿ ಮಂಗಳೂರಿನ ದಿನೇಶ್ ಕುಮಾರ್ ಆಳ್ವ ಹಾಗೂ ಎಸ್.ವಿ.ಶೇಷನ್ ಸದಸ್ಯರಾಗಿದ್ದಾರೆ. ಇಂದು ಆಳ್ವ ಮತ್ತು ಶೇಷನ್ ಅವರು ಪ್ರಾಧಿಕಾರದ ನ್ಯಾಯಾಧೀಶರೊಂದಿಗೆ ಆಗಮಿಸಿ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದರು.

ಮಂಗಳೂರಿನ ಪರಿಸರ ಹೋರಾಟಗಾರ್ತಿ ವಿದ್ಯಾ ದಿನಕರ್, ಎಲ್ಲೂರು ಗ್ರಾಪಂ ಉಪಾಧ್ಯಕ್ಷ ಹಾಗೂ ನಂದಿಕೂರು ಜನಜಾಗೃತ ಸಮಿತಿಯ ಜಯಂತ್ ಭಟ್ ಹಾಗೂ ಹರಿಕೃಷ್ಣ ಶೆಟ್ಟಿ ಅವರು ಸಮಿತಿ ಸದಸ್ಯರು ಹಾಗೂ ಕಂಪೆನಿಯ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯ ವೇಳೆ ಜನಜಾಗೃತಿ ಸಮಿತಿಯನ್ನು ಪ್ರತಿನಿಧಿಸಿದ್ದು, ಸಂತ್ರಸ್ತರ ಪರವಾಗಿ ತಮ್ಮ ವಾದ ಮಂಡಿಸಿದರು.

ಮೊದಲು ಯುಪಿಸಿಎಲ್ ಸ್ಥಾವರಕ್ಕೆ ಭೇಟಿ ನೀಡಿದ ಸಮಿತಿಯ ಸದಸ್ಯರಿಗೆ ಯುಪಿಸಿಎಲ್‌ನ ಆಡಳಿತ ನಿರ್ದೇಶಕ ಕಿಶೋರ್ ಆಳ್ವ ನೇತೃತ್ವದಲ್ಲಿ ಅಧಿಕಾರಿಗಳು, ಪರಿಸರ ಮಾಲಿನ್ಯ, ಜಲ, ವಾಯು ಮಾಲಿನ್ಯ ನಿಯಂತ್ರಣಕ್ಕೆ ತಾವು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಈ ಹಂತದಲ್ಲಿ ಕಂಪೆನಿ ಅಧಿಕಾರಿಗಳು ನೀಡಿದ ಮಾಹಿತಿಗಳ ಕುರಿತು ಜನಜಾಗೃತಿ ಸಮಿತಿಯ ಸದಸ್ಯರು ತೀವ್ರವಾದ ಆಕ್ಷೇಪಗಳನ್ನು ಎತ್ತಿದಾಗ ಬಿರುಸಿನ ಮಾತುಕತೆ ನಡೆಯಿತು ಎಂದು ತಿಳಿದುಬಂದಿದೆ. ಸಮಿತಿಯ ಸದಸ್ಯರ ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ವಿಫಲರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಳಿಕ ಪ್ರಾಧಿಕಾರದ ತಜ್ಞರ ಸಮಿತಿಯನ್ನು ಮುದರಂಗಡಿ ಗ್ರಾಮದ ಸಾಂತೂರು ಗ್ರಾಮದಲ್ಲಿ ನಿರ್ಮಿಸಿ ಈಗ ಮುಚ್ಚಿರುವ ‘ಆ್ಯಷ್ ಪಾಂಡ್’ ಪ್ರದೇಶಕ್ಕೆ ಕರೆದೊಯ್ದು ತೋರಿಸುವಾಗ ಅಲ್ಲಿ ಸೇರಿದ್ದ ಕೆಲ ಗ್ರಾಮಸ್ಥರು ಬೂದಿ ಹೊಂಡದಿಂದ ತಮಗೆ ಕುಡಿಯುವ ನೀರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ವಿವರಿಸಿದರು.

ಇದರಿಂದ ಆಸುಪಾಸಿನ ಯಾವುದೇ ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಇನ್ನು ಯುಪಿಸಿಎಲ್ ಪರವಾಗಿ ಜನರಿಗೆ ಸರಬರಾಜು ಮಾಡುತ್ತಿರುವ ನೀರು ಸಹ ಕುಡಿಯಲು ಅಯೋಗ್ಯವಾಗಿದೆ. ಮನೆಯಲ್ಲಿ ಬಾವಿ ಇದ್ದರೂ ಅವುಗಳನ್ನು ಕುಡಿಯಲು ಹಾಗೂ ಗೃಹಕೃತ್ಯಗಳಿಗೆ ಬಳಸಲು ಸಾದ್ಯವಿಲ್ಲದ ಪರಿಸ್ಥಿತಿ ಇದೆ ಎಂದು ಪಾದೆಬೆಟ್ಟಿನ ಅಶೋಕ್ ಎಂಬವರು ವಿವರಿಸಿದರು.

ಈ ವೇಳೆ ಕಂಪೆನಿ ಪರವಾಗಿ ಬ್ಯಾಟಿಂಗ್ ನಡೆಸಲು ಮುಂದಾಗ ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ಹಾಗೂ ಗ್ರಾಮಸ್ಥರು ಮತ್ತು ಜನಜಾಗೃತಿ ಸಮಿತಿಯ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಬಳಿಕ ಮೇಲ್ಮನವಿ ಪ್ರಾಧಿಕಾರದ ಸಮಿತಿ ಸದಸ್ಯರು ಸಂತ್ರಸ್ಥರ ಕೆಲ ಮನೆಗಳಿಗೆ ಭೇಟಿ ನೀಡಿ ಯೋಜನೆಯಿಂದ ಅವರ ಬದುಕು ನಾಶವಾಗಿರುವುದನ್ನು ಕಂಡುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಸದಸ್ಯ ದಿನೇಶ್ ಕುಮಾರ್ ಆಳ್ವ, ಪ್ರಾಧಿಕಾರದ ಆದೇಶದಂತೆ ನಾವಿಲ್ಲಿಗೆ ಬಂದಿದ್ದು ಸಮಗ್ರ ಮಾಹಿತಿಗಳನ್ನು ಕಲೆ ಹಾಕುತಿದ್ದೇವೆ. ಸಂತಸ್ತರನ್ನೂ ಭೇಟಿಯಾಗಿ ಅವರ ಹೇಳಿಕೆಗಳನ್ನೂ ಪಡೆದುಕೊಳ್ಳುತಿದ್ದೇವೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ನಮ್ಮ ಗಮನಕ್ಕೂ ಬಂದಿದೆ ಎಂದರು.

ನಾವು ನಮ್ಮ ವರದಿಯನ್ನು ನೀಡಿದ ಬಳಿಕ ಮೇಲ್ಮನವಿ ಪ್ರಾದಿಕಾರದಲ್ಲಿ ವಿಚಾರಣೆ ನಡೆಯುತ್ತದೆ. ಈ ವೇಳೆ ಮೂರು ಕಡೆಗಳ ವಕೀಲರು -ಯುಪಿಸಿಎಲ್ ಕಂಪೆನಿ, ಜನಜಾಗೃತ ಸಮಿತಿ, ಪರಿಸರ ಇಲಾಖೆ- ಉಪಸ್ಥಿತರಿದ್ದು ವಾದವನ್ನು ಮಂಡಿಸಲಿದ್ದಾರೆ. ವಿಚಾರಣೆಯ ಬಳಿಕ ತೀರ್ಪು ಹೊರಬರಲಿದೆ ಎಂದರು.
ನೀರು, ನೆಲ ಹಾಗೂ ವಾಯು ಮಾಲಿನ್ಯ ಆಗಿರುವ ಕುರಿತು ದೂರುಗಳಿದ್ದು, ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿ ಅವುಗಳ ಫಲಿತಾಂಶವನ್ನೂ ನಾವು ವರದಿಯಲ್ಲಿ ಸೇರಿಸುತ್ತೇವೆ ಎಂದರು. ಈಗ ಯಾವುದೇ ಅಭಿಪ್ರಾಯ ನೀಡಲು ಸಾದ್ಯವಿಲ್ಲ. ಅದು ನಾವು ಪ್ರಾಧಿಕಾರಕ್ಕೆ ನೀಡುವ ವರದಿಯಲ್ಲಿರುತ್ತದೆ ಎಂದು ಆಳ್ವ ತಿಳಿಸಿದರು.

ಹಸಿರು ಪೀಠದ ಆದೇಶ!

ಯುಪಿಸಿಎಲ್ ವಿರುದ್ಧ ಪರಿಸರದ ಮೂವರು ಗ್ರಾಮಸ್ಥರು ಹಾಗೂ ನಂದಿಕೂರು ಜನಜಾಗೃತಿ ಸಮಿತಿಯ ಸದಸ್ಯರಾದ ಜಯಂತ್‌ಕುಮಾರ್ ಭಟ್, ಹರಿಶ್ಚಂದ್ರ ಶೆಟ್ಟಿ ಹಾಗೂ ಉಳ್ಳೂರಿನ ಕರಿಯ ಶೆಟ್ಟಿ ಅವರು 2012ರಲ್ಲಿ ರಾಜ್ಯ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.

ಆದರೆ ಆಗ ದೂರನ್ನು ಸ್ವೀಕರಿಸಿ ವಿಚಾರಣೆ ನಡೆಸಲು ಪ್ರಾಧಿಕಾರ ನಿರಾಕರಿಸಿತ್ತು. ಇದರಿಂದ ಬೇರೆ ದಾರಿ ಕಾಣದೇ ಇವರು ಚೆನ್ನೈನ ಹಸಿರು ಪೀಠಕ್ಕೆ ದೂರು ನೀಡಿದರು. ಹಸಿರು ಪೀಠ ಅರ್ಜಿಯ ವಿಚಾರಣೆ ನಡೆಸಿ ನೀರು ಮತ್ತು ವಾಯು ಮಾಲಿನ್ಯದ ಕುರಿತಂತೆ ಇರುವ ಈ ದೂರಿನ ವಿಚಾರಣೆಯನ್ನು ಮೇಲ್ಮನವಿ ಪ್ರಾಧಿಕಾರವೇ ನಡೆಸಬೇಕೆಂದು ಆದೇಶಸಿದ ಹಿನ್ನೆಲೆಯಲ್ಲಿ ಇದೀಗ ಪ್ರಾಧಿಕಾರ ವಿಚಾರಣೆಯನ್ನು ಆರಂಭಿಸಿದೆ ಎಂದು ಜಯಂತ್ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News