×
Ad

ಬಟ್ಟಲಿನ ಅನ್ನ ಕಸಿದುಕೊಂಡ ಯುಪಿಸಿಎಲ್: ಸಂತಸ್ತೆ ವಿಮಲ

Update: 2016-11-04 21:29 IST

ಮುದರಂಗಡಿ, ನ.4: ಈ ಬೂದಿ ಕಂಪೆನಿ ಬಂದ ಮೇಲೆ ನನ್ನ ಅನ್ನದ ಬಟ್ಟಲು ಬರಿದಾಗಿದೆ. ನಮ್ಮ ಕುಟುಂಬಕ್ಕೆ ಅನ್ನದ ತುತ್ತನ್ನು ನೀಡುತಿದ್ದ ಮಲ್ಲಿಗೆ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ನನ್ನ ಅಕ್ಕನ ಮಗಳು ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾಳೆ. ನಾನು ಯಾವುದೇ ಕೆಲಸ ಮಾಡಲು ಸಾಧ್ಯವಾಗದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂದರು ಎಲ್ಲೂರು ಗ್ರಾಮ ಸಜೆಯ ನಿವಾಸಿ ಅವಿವಾಹಿತ ಮಹಿಳೆ ವಿಮಲ ಮೊಗ್ಗೇರ್ತಿ.

ಯುಪಿಸಿಎಲ್ ಸ್ಥಾವರಕ್ಕೆ ತಾಗಿಕೊಂಡಂತೆ ಇರುವ ಮನೆಯಲ್ಲಿ ತನ್ನ ಅಣ್ಣನ ಸಂಸಾರದೊಂದಿಗೆ ಇರುವ ವಿಮಲ, ಮನೆಯಲ್ಲಿ ಮಲ್ಲಿಗೆ ಬೆಳೆದು, ಬೇಸಾಯದ ಕೂಲಿಕೆಲಸ ಮಾಡಿ ಜೀವನ ಸಾಗಿಸುತಿದ್ದರು. ಯುಪಿಸಿಎಲ್ ಬಂದ ನಂತರ ಎರಡೂ ನಿಂತು ಹೋಗಿದೆ. ಹಾರುಬೂದಿಯಿಂದ ನಮಗೆ ಜೀವನ ಸಾಗಿಸುವುದೇ ಕಷ್ಟ. ಕೆಲ ವರ್ಷಗಳ ಹಿಂದೆ ಇಲ್ಲಿ ರಾಶಿ ರಾಶಿ ಬೂದಿ ಬೀಳುತ್ತಿತ್ತು ಎಂದರು.

ಇದರಿಂದ ನಮ್ಮ ಮನೆಯ ಬಾವಿ ನೀರು ಕುಡಿಯಲು ಸಾಧ್ಯವಿಲ್ಲವಾಗಿದೆ. ಈಗ ಎಲ್ಲೂರು ಗ್ರಾಪಂನ ಉಪಾಧ್ಯಕ್ಷರಾದ ಜಯಂತ್ ಭಟ್‌ರ ಸಹಾಯದಿಂದ ನಮಗೆ ಸಿಹಿನೀರು ಸರಬರಾಜಾಗುತ್ತಿದೆ ಎಂದರು. ಮನೆಯ ಕೃಷಿ, ತೋಟ ಎಲ್ಲವೂ ನಾಶವಾಗಿದೆ. ಸ್ಥಾವರ ಬಂದ ನಂತರ ಅಕ್ಕಳ ಮಗಳು ರೇಣುಕಾ (23) ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಎರಡು ವರ್ಷಗಳ ಹಿಂದೆ ಮೃತಪಟ್ಟಳು. ನಾನೀಗ ಅನಾರೋಗ್ಯದಿಂದ ಕೆಲಸ ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಕಣ್ಣೀರಿಟ್ಟರು.

ಇಲ್ಲೇ ಪಕ್ಕದಲ್ಲಿ ವಾಸವಾಗಿದ್ದ ಜಯಂತ್ ಭಟ್ ಅವರು ಹಾರುಬೂದಿ ಹಾಗೂ ಇತರ ಮಾಲಿನ್ಯಗಳಿಂದ ಬೇಸತ್ತು ಮನೆಯನ್ನು ತೊರೆದು ಮುಲ್ಕಿಯ ಕಾರ್ನಾಡಿನಲ್ಲಿ ಮನೆ ಮಾಡಿದ್ದಾರೆ. ಇಲ್ಲಿ ನಮಗೆ ಒಂದು ತುತ್ತು ಅನ್ನ ತಿನ್ನುವ ಸ್ಥಿತಿ ಇರಲಿಲ್ಲ. ಮನೆ ತೊರೆದರೂ ನಾನು ಗ್ರಾಪಂ ಚುನಾವಣೆಯಲ್ಲಿ ನಿಂತು ಗೆದ್ದು ಉಪಾಧ್ಯಕ್ಷನಾಗಿದ್ದೇನೆ. ಸಂತ್ರಸ್ಥರಿಗೆ ಕೈಲಾದ ಸೇವೆ ಮಾಡುತ್ತಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News