ಡಿಸೆಂಬರ್ ಅಂತ್ಯದೊಳಗೆ ಎಲ್ಲ ರಸ್ತೆಗಳ ಹೊಂಡ ಮುಚ್ಚಿ: ಸಚಿವ ಪ್ರಮೋದ್ ಮಧ್ವರಾಜ್ ಸೂಚನೆ

Update: 2016-11-04 16:05 GMT

ಉಡುಪಿ, ನ.4: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ಜಿಪಂ, ಲೋಕೋಪಯೋಗಿ ಹಾಗೂ ನಗರಸಭೆಯ ರಸ್ತೆಗಳ ಹೊಂಡ ಮುಚ್ಚುವ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಂಬಂಧಪಟ್ಟ ಇಲಾಖೆಗಳ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.

ಉಡುಪಿ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಇಂಜಿನಿಯರ್ಸ್‌ಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು. ಜಿಲ್ಲಾ ಪಂಚಾ ಯತ್ ರಸ್ತೆಯ ಹೊಂಡಗಳನ್ನು ಡಿ.15ರೊಳಗೆ, ನಗರಸಭೆ ಡಿ.31ರೊಳಗೆ, ಮೀನುಗಾರಿಕಾ ರಸ್ತೆಯನ್ನು ಒಂದು ವಾರದೊಳಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಹೊಂಡ ಮುಚ್ಚುವ ಕೆಲಸವನ್ನು ನವೆಂಬರ್ ಅಂತ್ಯದೊಳಗೆ ನಡೆಸುವುದಾಗಿ ಇಂಜಿನಿಯರ್‌ಗಳು ಸಭೆಗೆ ತಿಳಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2013-14ರಿಂದ 2016-17 ರವರೆಗೆ ರಸ್ತೆ, ಸೇತುವೆ ಸೇರಿದಂತೆ ಒಟ್ಟು 438.76 ಕೋಟಿ ಮೊತ್ತದ 4014 ಕಾಮಗಾರಿಗಳು ಮಂಜೂರಾಗಿದ್ದು, ಅದರಲ್ಲಿ 297.11ಕೋಟಿ ರೂ. ಮೊತ್ತದ 2793 ಕಾಮ ಗಾರಿಗಳು ಪೂರ್ಣಗೊಂಡಿವೆ. 47.65ಕೋಟಿ ರೂ. ಮೊತ್ತದ 459 ಕಾಮಗಾರಿಗಳು ಪ್ರಗತಿಯಲ್ಲಿದ್ದು, 93.99ಕೋಟಿ ಮೊತ್ತದ 762 ಕಾಮಗಾರಿಗಳು ಬಾಕಿ ಇವೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.

ಮರಳು ಸರಬರಾಜು

ಇದೀಗ ನಾನ್‌ಸಿಆರ್‌ಝೆಡ್ ಪ್ರದೇಶದಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದ್ದು, ಅಗತ್ಯ ಇರುವ ಇಲಾಖೆಗಳ ಕಾಮಗಾರಿ ಗಳಿಗೆ ಮರಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಲೋಕೋಪ ಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ್ ಸಭೆಗೆ ತಿಳಿಸಿದರು.

5,720ರೂ. ಮೊತ್ತದ ಡಿಡಿ ನೀಡಿದರೆ ಒಂದು ಲೋಡ್ ಮರಳನ್ನು ನೀಡ ಲಾಗುತ್ತಿದೆ. ಜನಸಾಮಾನ್ಯರಿಗೆ ಮರಳು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ 43ಡಿಡಿಗಳು ಬಂದಿವೆ ಎಂದರು. ಬಲ್ಕ್ ಬುಕ್ಕಿಂಗ್ ಮಾಡುವ ವರಿಗೆ ಮರಳನ್ನು ನೀಡಬೇಡಿ ಮತ್ತು ಯಾರು ಕೂಡ ಮರಳನ್ನು ಸಂಗ್ರಹಿಸಿ ಇಡದಂತೆ ನೋಡಿಕೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ 51.88ಕೋಟಿ ರೂ. ಮೊತ್ತದ 81 ಕಾಮಗಾರಿಗಳು ಪೂರ್ಣಗೊಂಡಿದ್ದು, ನೀಲಾವರ ಮತ್ತು ಕೂರಾಡಿ ಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.

ಕಳೆದ ಮೂರು ವರ್ಷಗಳಲ್ಲಿ ನಿರ್ಮಿತಿ ಕೇಂದ್ರದಿಂದ 23.42ಕೋಟಿ ರೂ. ಮೊತ್ತದ 202ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 7ಕೋಟಿ ರೂ. ಮೊತ್ತದ 18 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೇಂದ್ರದ ಇಂಜಿನಿಯರ್ ಮಾಹಿತಿ ನೀಡಿದರು.

ಮೀನು ಮಾರುಕಟ್ಟೆ ಸಿದ್ಧ 

ಉಡುಪಿ ನಗರದ ಮೀನು ಮಾರುಕಟ್ಟೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಉದ್ಘಾಟನೆಗೆ ಸಮಯ ನೀಡುವಂತೆ ಅಧಿಕಾರಿಗಳು ಸಚಿವರಲ್ಲಿ ಕೇಳಿಕೊಂಡರು. ಸಮುದ್ರ ಕೊರತೆದ ತಡೆಗೋಡೆ ನಿರ್ಮಿಸುವ 12 ಕಾಮಗಾರಿ ಗಳಲ್ಲಿ 11 ಪೂರ್ಣಗೊಂಡಿದೆ. ಮಲ್ಪೆ ಬಂದರು ಮೂರನೆ ಹಂತದ ಕಾಮಗಾರಿಗೆ ಕೇಂದ್ರ ಸರಕಾರದಿಂದ ಎಂಟು ಕೋಟಿ ರೂ. ಬರಲು ಬಾಕಿ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಡೆಲ್ಟಾ ಯೋಜನೆಯಲ್ಲಿ ಉಡುಪಿ ಬಸ್ ನಿಲ್ದಾಣಕ್ಕೆ 6.61ಕೋಟಿ ರೂ. ಹಾಗೂ ಮಣಿಪಾಲ ಬಸ್ ನಿಲ್ದಾಣಕ್ಕೆ 2.61ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಮಲ್ಪೆ ಸಿಟಿಜನ್ ಸರ್ಕಲ್‌ನಿಂದ ಸಚಿವರ ಮನೆವರೆಗಿನ ರಸ್ತೆಯನ್ನು ಚತುಷ್ಪಥ ಗೊಳಿಸುವ ಕಾಮಗಾರಿಗೆ 5ಕೋಟಿ ರೂ. ಮತ್ತು ಮಿಷನ್ ಕಂಪೌಂಡ್‌ನಿಂದ ಕೊರಂಗ್ರಪಾಡಿವರೆಗಿನ ರಸ್ತೆ ಅಭಿವೃದ್ಧಿಗೆ 7.9ಕೋಟಿ ರೂ. ಮೊತ್ತವನ್ನು ಅಂದಾಜಿಸಲಾಗಿದೆ ಎಂದು ನಗರ ಸಭೆ ಇಂಜಿನಿಯರ್ ತಿಳಿಸಿದರು.

ಮಲ್ಪೆಯಿಂದ ಪರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲು ಈಗಾಗಲೇ 114ಕೋಟಿ ರೂ. ಮೊತ್ತದ ಯೋಜನೆಯನ್ನು ತಯಾರಿಸಿ 15ದಿನಗಳೊಳಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಇಲಾಖೆಯ ಇಂಜಿನಿಯರ್ ತಿಳಿಸಿದರು. ಈ ಯೋಜನೆಯಲ್ಲಿ ಮಣಿಪಾಲ ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟಿಕರಣಗೊಳಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಸಭೆಯಲ್ಲಿ ಪಂಚಾಯತ್‌ರಾಜ್ ಇಂಜಿನಿಯರ್ ವಿಭಾಗದ ಕಾರ್ಯನಿ ರ್ವಾಹಕ ಅಭಿಯಂತರ ವಿ.ರಾಜ, ಸಣ್ಣ ನೀರಾವರಿ ವಿಭಾಗದ ಕಾರ್ಯನಿ ರ್ವಾಹಕ ಅಭಿಯಂತರ ಎಂ.ವಿ.ಪ್ರಕಾಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶರಣ ಬಸಪ್ಪ, ಪೌರಾಯುಕ್ತ ಡಿ.ಮಂಜುನಾಥಯ್ಯ ಉಪಸ್ಥಿತರಿದ್ದರು.

ಬೋರ್ಡ್‌ನಲ್ಲಿ ಹೆಸರು ಹಾಕಲು ತಾಕೀತು

‘ನಾನು ಇತರ ಇಲಾಖೆಯ ಸಚಿವರು, ಅಧಿಕಾರಿಗಳಲ್ಲಿ ಕಾಡಿಬೇಡಿ ಮಂಜೂರು ಮಾಡಿಸಿ ಹಣ ಬಿಡುಗಡೆಗೊಳಿಸಿದ ಕಾಮಗಾರಿಗಳಲ್ಲಿ ಬೋರ್ಡ್ ನಿರ್ಮಿಸಿ ನನ್ನ ಹೆಸರು ಹಾಕಬೇಕು’ ಎಂದು ಸಚಿವ ಪ್ರಮೋದ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೆಲವು ಕಾಮಗಾರಿಗಳಿಗೆ ಬೋರ್ಡ್ ಹಾಕದ ಆಯಾ ಇಲಾಖೆಯ ಇಂಜಿನಿಯರ್‌ಗಳನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ವಾರದೊಳಗೆ ಪೂರ್ಣಗೊಂಡ ಕಾಮಗಾರಿಯಲ್ಲಿ ಬೋರ್ಡ್ ನಿರ್ಮಿಸಿ ನನ್ನ ಹೆಸರು ಹಾಕುವಂತೆ ಸೂಚನೆ ನೀಡಿದ ಅವರು, ಸದ್ಯವೇ ಕಾಮಗಾರಿ ಹಾಗೂ ಬೋರ್ಡ್ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News