×
Ad

ಬಿಜೆಪಿ ಮುಖಂಡರಿಂದ ಮಹಿಳೆಗೆ ಹಲ್ಲೆ ಆರೋಪ: ದೂರು

Update: 2016-11-04 21:57 IST

ಮುಲ್ಕಿ, ನ.4: ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸೇರಿ ಬಿಜೆಪಿ ನಾಯಕರು ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಂದಿಗೆ ಗೂಂಡಾಗಿರಿ ಪ್ರದರ್ಶಿಸಿ ಆಕೆಗೆ ಗಂಭೀರ ಹಲ್ಲೆ ನಡೆಸಿದ್ದು, ತೀವ್ರಗಾಯಗೊಂಡಿರುವ ಮಹಿಳೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಪಂಜ ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಶಾಂತಾ ದೇವಾಡಿಗ (75) ಎಂದು ಗುರುತಿಸಲಾಗಿದೆ.

ಶಾಂತಾ ಅವರ ಪುತ್ರ ಭೋಗರಾಜ್ ಎಂಬವರು ವಿಕಲಚೇತನರಾಗಿದ್ದು, ತನ್ನ ಮನೆಯ ಬಳಿ ವರ್ಷದ ಹಿಂದೆ ಸ್ಥಳೀಯರ ನಿಪೇಕ್ಷಣಾ ಪತ್ರ ಹಾಗೂ ಗ್ರಾಮ ಪಂಚಾಯತ್‌ನಿಂದ ಪರವಾನಿಗೆ ಪಡೆದು ಕೋಳಿ ಸಾಕಣೆಯ ಫಾರಂ ನಡೆಸುತ್ತಿದ್ದರು.

ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಸ್ಥಳೀಯರೊಬ್ಬರು ಕೋಳಿ ಫಾರಂ ವಿರುದ್ಧ ಪಂಚಾಯತ್‌ಗೆ ದೂರು ನೀಡಿದ್ದರೆನ್ನಲಾಗಿದ್ದು, ಅದರಂತೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾ.ಪಂ. ಅಧ್ಯಕ್ಷ ನಾಗೇಶ್, ಸದಸ್ಯ ಸುದಾಕರ ಶೆಟ್ಟಿ, ಶೇಷಪ್ಪ ಎಂಬವರು ಏಕಾಏಕಿ ಕೋಳಿ ಸಾಕಣೆ ಕೇಂದ್ರಕ್ಕೆ ಗೂಂಡಾಗಳೊಂದಿಗೆ ಬಂದು ಉದ್ಯಮ ನಡೆಸಬಾರದು ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆಯಿತು. ಉದ್ಯಮಕ್ಕಾಗಿ ತಾನು ಬ್ಯಾಂಕ್ ಹಾಗೂ ಸ್ಥಳೀಯರಿಂದ ಕೈಸಾಲ ಪಡೆದಿದ್ದು, ಅದನ್ನು ನೀಡಿದರೆ ಉದ್ಯಮ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರೂ, ಸ್ಥಳದಲ್ಲಿದ್ದ ಮುಲ್ಕಿ ಪೊಲೀಸರ ಸಮ್ಮುಖದಲ್ಲೇ ತನ್ನ ತಾಯಿ 75 ವರ್ಷ ಪ್ರಾಯದ ಶಾಂತಾರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಶಾಂತಾ ಅವರ ಪುತ್ರ, ಕೋಳಿ ಸಾಕಣೆ ಕೇಂದ್ರ ನಡೆಸುತ್ತಿದ್ದ ಭೋಜರಾಜ್ ಆರೋಪಿಸಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಶಾಂತಾ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸರಿಗೆ ಶಾಂತಾ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News