ವರದಕ್ಷಿಣೆ ಕಿರುಕುಳ: ದೂರು
ಮಂಗಳೂರು, ಅ. 4: ಪತಿಯೋರ್ವ ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರದಬ್ಬಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಯುವತಿ ಮರಿಯಮ್ಮ ಎಂಬಾಕೆಯನ್ನು 6 ವರ್ಷಗಳ ಹಿಂದೆ ಫಯಾಝ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆರೋಪಿ ಫಯಾಝ್ ಮತ್ತು ಆತನ ಮನೆಯವರು ಮದುವೆ ಸಮಯ 25 ಪವನ್ ಬಂಗಾರ ಮತ್ತು 2 ಲಕ್ಷ ನಗದನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದರು. ಈಗ ಸುಮಾರು 3 ವರ್ಷಗಳಿಂದ ಆರೋಪಿ ಫಯಾಝ್ ಮತ್ತು ಆತನ ತಾಯಿ ರಝಿಯಾ ಆತನ ತಂಗಿ ಮತ್ತು ಅಕ್ಕಂದಿರು ಸೇರಿ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಹಾಕಿದ್ದಾರೆ ಎಂದು ಮರಿಯಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.