×
Ad

ಟಿವಿ ಚಾನೆಲ್ ಮೇಲಿನ ನಿಷೇಧ ಕುರಿತು ಟೀಕೆಗಳಿಗೆ ಸಚಿವ ನಾಯ್ಡು ಖಂಡನೆ

Update: 2016-11-05 16:15 IST

ಚೆನ್ನೈ,ನ.5: ಎನ್‌ಡಿಟಿವಿ ಇಂಡಿಯಾ ಚಾನೆಲ್ ಮೇಲಿನ ಒಂದು ದಿನದ ನಿಷೇಧಕ್ಕೆ ಸಂಬಂಧಿಸಿದಂತೆ ತುರ್ತು ಸ್ಥಿತಿಯನ್ನು ಪ್ರಸ್ತಾಪಿಸಿರುವುದನ್ನು ಇಂದಿಲ್ಲಿ ಖಂಡಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ದೇಶದ ಭದ್ರತೆ ಮತ್ತು ಸುರಕ್ಷತೆಯ ಹಿತಾಸಕ್ತಿಯಲ್ಲಿ ಈ ಹಿಂದಿ ಸುದ್ದಿವಾಹಿನಿಯ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ಸರಕಾರವು ಮಾಧ್ಯಮ ಸ್ವಾತಂತ್ರದ ಕುರಿತು ಅತ್ಯುನ್ನತ ಗೌರವವನ್ನು ಹೊಂದಿದೆ ಮತ್ತು ಇಂತಹ ವಿಷಯಗಳಲ್ಲಿ ರಾಜಕೀಯ ಬೆರೆಸುವದರಿಂದ ದೇಶದ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ ಅಷ್ಟೇ ಎಂದರು.

 ತುರ್ತು ಸ್ಥಿತಿಯ ಕರಾಳ ದಿನಗಳ ಬಗ್ಗೆ ಮಾತನಾಡುತ್ತಿರುವುದಕ್ಕಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ತರಾಟೆಗೆತ್ತಿಕೊಂಡ ಅವರು, ತನಗೆ ಅಚ್ಚರಿಯಾಗುತ್ತಿದೆ. ಕೆಲವರು ತುರ್ತು ಸ್ಥಿತಿ ಸದೃಶ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಸರಕಾರವು ಟಿವಿ ವಾಹಿನಿಯೊಂದನ್ನು ನಿಷೇಧಿಸಿರುವುದು ಇದೇ ಪ್ರಥಮ ಎಂದು ಅವರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೋ ಗೊತ್ತಿಲ್ಲ. ಈ ಹಿಂದೆ ಎಷ್ಟು ಸಲ ವಾಹಿನಿಗಳನ್ನು ನಿಷೇಧಿಸಲಾಗಿತ್ತೆಂಬ ಪಟ್ಟಿಯನ್ನು ನೀಡಲೇ ಎಂದು ಪ್ರಶ್ನಿಸಿದರು.

ಈ ಹಿಂದೆ ನಿಷೇಧಿಸಲಾಗಿದ್ದ ಕೆಲವು ಟಿವಿ ವಾಹಿನಿಗಳ ಹೆಸರುಗಳನ್ನು ಉಲ್ಲೇಖಿಸಿದ ಅವರು, ಎಎಕ್ಸ್‌ಎನ್ ಮತ್ತು ಎಫ್‌ಟಿವಿ ಚಾನೆಲ್‌ಗಳನ್ನು ಎರಡು ತಿಂಗಳ ಕಾಲ, ಎಂಟರ್ 10 ಅನ್ನು ಒಂದು ದಿನ, ಎಬಿಎನ್ ಆಂಧ್ರಜ್ಯೋತಿಯನ್ನು ಒಂದು ವಾರ ಮತ್ತು ಭಾರತದ ತಪ್ಪು ನಕಾಶೆಯನ್ನು ತೋರಿಸಿದ್ದಕ್ಕಾಗಿ ಅಲ್ ಜಝೀರಾವನ್ನು ಐದು ದಿನಗಳ ಕಾಲ ನಿಷೇಧಿಸಲಾಗಿತ್ತು ಎಂದರು.

 ಇವೆಲ್ಲ ಈ ಹಿಂದೆ ಹೇರಿದ್ದ ನಿಷೇಧಗಳಾಗಿವೆ. ಈಗ ಅವರು ಮೊದಲ ಬಾರಿಗೆ ಇಂತಹ ನಿಷೇಧವನ್ನು ಹೇರಲಾಗಿದೆ,ಪ್ರಜಾಪ್ರಭುತ್ವದ ಕೊಲೆ,ತುರ್ತು ಸ್ಥಿತಿಯ ನೆನಪು ಎಂದೆಲ್ಲ ಹೇಳುತ್ತಿದ್ದಾರೆ ಎಂದ ನಾಯ್ಡು, ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎನ್ನುವುದು ಜನರಿಗೆ ಗೊತ್ತಿದೆ ಮತ್ತು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಯಾವುದು ಅಗತ್ಯ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಇದೇ ಕಾರಣದಿಂದ ವಿಷಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕೆಲವರನ್ನು ಹೊರತುಪಡಿಸಿ ಇತರರೆಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರದ ನಿಲುವನ್ನು ಬೆಂಬಲಿಸಿದ್ದಾರೆ ಎಂದರು

  ರಾಹುಲ್ ಗಾಂಧಿಯವರು ತುರ್ತು ಸ್ಥಿತಿಯ ಕರಾಳ ದಿನಗಳ ಬಗ್ಗೆ ಮಾತನಾಡು ತ್ತಿದ್ದಾರೆ. ತುರ್ತು ಸ್ಥಿತಿ ಎಂದರೆ ಏನು ಎನ್ನುವುದು ನಿಮಗೆ ಗೊತ್ತೇ? ಆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದು ಈಗ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿರುವವರೂ ತುರ್ತು ಸ್ಥಿತಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ, ಏಕೆಂದರೆ ಇದು ಈಗ ಫ್ಯಾಷನ್ ಆಗಿಬಿಟ್ಟಿದೆ. ಅವರು ಸರಕಾರವನ್ನು ಟೀಕಿಸಲು ಪ್ರತಿಯೊಂದೂ ಸಂದರ್ಭವನ್ನು ಬಳಸಿಕೊಳ್ಳಲು ಬಯಸುತ್ತಿದ್ದಾರೆ ಮತ್ತು ಪ್ರತಿಯೊಂದಕ್ಕೂ ಪ್ರಧಾನಿಯವರ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ನಾಯ್ಡು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News