ನೂತನ ಆಂಧ್ರಪ್ರದೇಶ ರಾಜಧಾನಿಯಲ್ಲಿ ಪ್ರತಿಯೊಂದೂ ‘ಅಮರಾವತಿ’

Update: 2016-11-05 11:20 GMT

ಅಮರಾವತಿ,ನ.5: ಇಂದಿನ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ನೂತನ ಉದ್ಯಮ ಸಂಸ್ಥೆಗಳಿಗೆೆ ಹೆಸರನ್ನಿಡುವ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಮರಾವತಿ ಎಲ್ಲರ ಏಕೈಕ ಆಯ್ಕೆಯಾಗಿರುವಂತಿದೆ.19 ತಿಂಗಳ ಹಿಂದೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜಧಾನಿ ನಗರಕ್ಕೆ ಅಧಿಕೃತವಾಗಿ ನಾಮಕರಣ ಮಾಡಿದಾಗಿನಿಂದ ಪ್ರತಿಯೊಬ್ಬರಿಗೂ ಸುಲಭವಾಗಿ ಹೊಳೆಯುತ್ತಿರುವ ಹೆಸರೇ ಅಮರಾವತಿ.

ಸರಕಾರಿ ಯೋಜನೆಗಳಿಂದ ಹಿಡಿದು ಹೋಟೆಲ್‌ಗಳು, ರೆಸ್ಟೋರಂಟ್‌ಗಳು, ಔಷಧಿ ಅಂಗಡಿಗಳು, ರಿಯಲ್ ಎಸ್ಟೇಟ್ ಯೋಜನೆಗಳು, ಟ್ಯಾಕ್ಸಿ ಸೇವೆ, ಸೆಕ್ಯೂರಿಟಿ ಏಜನ್ಸಿಯಿಂದ ಅಂಗಡಿ-ಮುಂಗಟ್ಟುಗಳವರೆಗೆ ಪ್ರತಿಯೊಂದೂ ಅಮರಾವತಿ ಹೆಸರನ್ನಿಟ್ಟುಕೊಂಡಿವೆ. ವಿಜಯವಾಡಾ ಮತ್ತು ಗುಂಟೂರುಗಳಲ್ಲಿ ಕಳೆದೆರಡು ತಿಂಗಳುಗಳಲ್ಲಿ ದೊಡ್ಡದು ಮತು ಸಣ್ಣದು ಸೇರಿದಂತೆ ಸುಮಾರು 200 ಅಂಗಡಿ-ಮುಂಗಟ್ಟುಗಳು ಅಮರಾವತಿ ಎಂದು ನಾಮಕರಣಗೊಂಡಿವೆ.

 ಇದು ನೂತನ ರಾಜಧಾನಿಗೆ ಬೆಂಬಲವನ್ನು ವ್ಯಕ್ತಪಡಿಸುವ ನಮ್ಮ ರೀತಿಯಾಗಿದೆ. ಜಾಗತಿಕ ಗುಣಮಟ್ಟದ ರಾಜಧಾನಿ ನಗರವೊಂದು ನಿರ್ಮಾಣಗೊಳ್ಳುತ್ತಿರುವಾಗ ಇದು ನಾವು ಮಾಡಬಹುದಾದ ಕನಿಷ್ಠ ಕಾರ್ಯವಾಗಿದೆ ಎಂದು ಗುಂಟೂರಿನ ಅಮರಾವತಿ ಚೆಸ್ ಅಕಾಡಮಿಯ ರವೀಂದ್ರ ರಾಜು ಹೇಳಿದರು.

ಕೆಲವರು ಸ್ಥಳೀಯ ಹೆಮ್ಮೆಯ ಭಾವನೆಯೊಂದಿಗೆ ತಮ್ಮ ವ್ಯವಹಾರಗಳಿಗೆ ಅಮರಾವತಿಯ ಹೆಸರನ್ನಿಟ್ಟುಕೊಂಡರೆ, ಇತರರು ಈ ಹೊಸಹುಚ್ಚಿನ ಲಾಭ ಪಡೆದು ಕೊಳ್ಳುತ್ತಿದ್ದಾರೆ. ಅಂದ ಹಾಗೆ ಈ ಪ್ರವೃತ್ತಿ ವಿಜಯವಾಡಾ ಮತ್ತು ಗುಂಟೂರು ನಗರಗಳಿಗಷ್ಟೇ ಸೀಮಿತವಾಗಿಲ್ಲ. ಮಛಲಿಪಟ್ಣಂ,ನಂದಿಗಾಮ ಮತ್ತು ಆಸುಪಾಸಿನ ಗ್ರಾಮಗಳು ಸಹ ತಮ್ಮ ಲಾಭಕ್ಕಾಗಿ ಅಮರಾವತಿ ಹೆಸರನ್ನು ಬಳಸಿಕೊಳ್ಳುತ್ತಿವೆ.

ನಾವು ಸಣ್ಣ ಪ್ರಮಾಣದಲ್ಲಿ ವ್ಯಾಪಾರವನ್ನು ಆರಂಭಿಸಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಗ್ರಾಹಕರನ್ನು ಆಕರ್ಷಿಸುವಲ್ಲಿ ಅಮರಾವತಿ ಹೆಸರು ತುಂಬ ನೆರವಾಗುತ್ತಿದೆ ಮತ್ತು ಇದೇ ಕಾರಣಕ್ಕಾಗಿ ನಾವು ಈ ಹೆಸರನ್ನಿಟ್ಟಿದ್ದೇವೆ ಎಂದು ಮಛಲಿಪಟ್ಣಂ ಬಳಿ ಅಮರಾವತಿ ಕರಿ ಪಾಯಿಂಟ್ ನಡೆಸುತ್ತಿರುವ ಎಂ.ಸೂರ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News