ಉತ್ತರಪ್ರದೇಶದಲ್ಲಿ ಮಿಶನ್ 256+ ಗಾಗಿ ಇಂದಿನಿಂದ ಬಿಜೆಪಿಯ ಪರಿವರ್ತನ್ ಯಾತ್ರಾ
ಲಕ್ನೊ,ನ. 5: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಿಶನ್ 256ಪ್ಲಸ್ ಪ್ರಯುಕ್ತ ಭಾರತೀಯ ಜನತಾಪಾರ್ಟಿ ಇಂದಿನಿಂದ ಪರಿವರ್ತನೆಯಾತ್ರೆಯನ್ನು ಆರಂಭಿಸುತ್ತಿದ್ದು, ಜೊತೆಯಲ್ಲಿ ಚುನಾವಣಾ ಪ್ರಚಾರವನ್ನು ಕೂಡಾ ನಡೆಸಲಿದೆ ಎಂದು ವರದಿಯಾಗಿದೆ. ಬಿಜೆಪಿ ನಾಲ್ಕು ಪರಿವರ್ತನಾ ಯಾತ್ರೆಗಳನ್ನು ಹಮ್ಮಿಕೊಂಡಿದೆ. ಮೊದಲ ಯಾತ್ರೆ ಇಂದು ಸಹರನಾಪುರದಿಂದ ಆರಂಭಗೊಳ್ಳಲಿದೆ. ನವೆಂಬರ್ ಆರಕ್ಕೆ ಎರಡನೆ ಯಾತ್ರೆ ಝಾನ್ಸಿಯಿಂದ ಆರಂಭವಾಗಲಿದೆ.ನವೆಂಬರ್ ಎಂಟಕ್ಕೆ ಮೂರನೆ ಪರಿವರ್ತನಾ ಯಾತ್ರೆ ಸೊನಭದ್ರದಿಂದ ಮತ್ತು ನವೆಂಬರ್ ಒಂಬತ್ತಕ್ಕೆ ಬಲಿಯಾದಿಂದ ನಾಲ್ಕನೆ ಪರಿವರ್ತನಾ ಯಾತ್ರೆ ಹೊರಡಲಿದೆ.
ಅಮಿತ್‌ಶಾ ಹಸಿರು ನಿಶಾನೆ ತೋರಿಸಲಿದ್ದಾರೆ:
ಸಮಾಜವಾದಿ ಪಾರ್ಟಿಯ ವಿಕಾಸ ರಥಕ್ಕೆ ಪ್ರತಿಯಾಗಿ ಬಿಜೆಪಿ ಪರಿವರ್ತನಾ ರಥವನ್ನು ತಯಾರಿಸಿದೆ. ಎಲ್ಲ ಯಾತ್ರೆಗಳಿಗೂ ಅಧ್ಯಕ್ಷ ಅಮಿತ್ ಶಾ ಹಸಿರು ಧ್ವಜತೋರಿಸಿ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಸಾಗಲಿದೆ. ಯಾತ್ರೆಯ ವೇಳೆ ಬಿಜೆಪಿ ಚುನಾವಣಾ ಪ್ರಚಾರ ಕೂಡಾ ನಡೆಸಲಿದೆ. ಯಾತ್ರೆಗಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾದ ಡಿಸೆಂಬರ್ 25ಕ್ಕಿಂತ ಒಂದು ದಿನ ಮೊದಲು ಲಕ್ನೊದಲ್ಲಿ ಬಂದು ಸೇರಲಿವೆ. ಅಂದು ಲಕ್ನೊದಲ್ಲಿ ದೊಡ್ಡ ಜಾತನಡೆಯಲಿದ್ದು, ಪ್ರಧಾನಿ ನರೇಂದ್ರಮೋದಿ ಜಾತಯನ್ನು ಉದ್ದೇಶಿಸಿ ಮಾತಾಡಲಿದ್ದಾರೆಂದು ವರದಿ ತಿಳಿಸಿದೆ.