×
Ad

ಪ್ರೌಢಶಾಲೆಯ ಗುಮಾಸ್ತ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಶಾಸಕಿ

Update: 2016-11-05 17:41 IST

ಪುತ್ತೂರು, ನ.5: ಪುತ್ತೂರು ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಕರ್ತವ್ಯಕ್ಕೆ ಹಾಜರಾಗದೆ ಎರಡು ತಿಂಗಳು ಕಳೆದರೂ ಇಲಾಖೆ ಯಾವುದೇ ಕ್ರಮಕೈಗೊಳ್ಳದೆ ವೌನ ವಹಿಸಿರುವ ಮತ್ತು ಫ್ಯಾಮಿಲಿ ಟ್ರಸ್ಟೊಂದರ ಹೆಸರಿನಲ್ಲಿರುವ ಬೆಂದ್ರ್‌ತೀರ್ಥ ವ್ಯವಸ್ಥೆಯನ್ನು ನೋಡಿಕೊಳ್ಳುವ ಕಾವಲುಗಾರರೊಬ್ಬರಿಗೆ ಸರಕಾರದ ವತಿಯಿಂದ 8 ಸಾವಿರ ರೂ. ಮಾಸಿಕ ವೇತನ ಸಂದಾಯವಾಗುತ್ತಿರುವ ಎರಡು ಪ್ರತ್ಯೇಕ ಪ್ರಕರಣಗಳು ಶನಿವಾರ ಪುತ್ತೂರಿನ ಸಮುದಾಯ ಭವನದಲ್ಲಿ ನಡೆದ ಪುತ್ತೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಬಹಿರಂಗಗೊಂಡಿತು.

ಕ್ಷೇತ್ರ ಶಿಕ್ಷಣಾ ಇಲಾಖೆಯ ಕಚೇರಿಯಲ್ಲಿಯೇ ಇದ್ದ ಸಿಬ್ಬಂದಿಯೊಬ್ಬರು ಕಳೆದ ಎರಡು ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಕಾಣೆಯಾಗಿದ್ದರೂ ದೂರು ನೀಡದೆ, ಸೂಕ್ತ ಕ್ರಮಕೈಗೊಳ್ಳದೆ ವೌನ ವಹಿಸಿರುವ ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ ಶಕುಂತಳಾ ಶೆಟ್ಟಿ, ಶಿಕ್ಷಣ ಇಲಾಖೆ ನಿದ್ದೆಯಲ್ಲಿದೆಯೇ ಎಂದು ಪ್ರಶ್ನಿಸಿ, ಇದು ಇಲಾಖೆಗೇ ಅಪಮಾನ ಎಂದು ಜರಿದು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಪ್ರಸಂಗವೂ ನಡೆಯಿತು. ಪುತ್ತೂರು ಹೋಬಳಿ ಮಟ್ಟದ ಜನಸಂಪರ್ಕ ಸಬೆ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಟ್ಟಂಪಾಡಿ ಸರಕಾರಿ ಪ್ರೌಢ ಶಾಲೆಯ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಕೆ.ಪಿ.ಭಟ್ ವಿಷಯ ಪ್ರಸ್ತಾಪಿಸಿ ಬೆಟ್ಟಂಪಾಡಿ ಪ್ರೌಢ ಶಾಲೆಗೆ ಒಂದು ವರ್ಷದ ಹಿಂದೆ ಗುಮಾಸ್ತರಾಗಿ ನೇಮಕಗೊಂಡಿದ್ದ ಮಹಾದೇವ ಎಂಬವರು ಕರ್ತವ್ಯಕ್ಕೆ ಹಾಜರಾದ ಬಳಿಕ ನಾಪತ್ತೆಯಾಗಿದ್ದರು. ಎಲ್ಲಿ ಹೋಗಿದ್ದಾರೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ. ಕೆಲ ಸಮಯದ ಬಳಿಕ ಪತ್ನಿ ಮಕ್ಕಳೊಂದಿಗೆ ಆಗಮಿಸಿದ್ದ ಅವರನ್ನು ನಾವು ನೀಡಿರುವ ದೂರಿನ ಮೇರೆಗೆ ಮತ್ತು ಅವರ ಮೇಲೆ ಬಹಳಷ್ಟು ಆರೋಪಗಳಿದ್ದ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲೇ ಉಳಿಸಿಕೊಳ್ಳಲಾಗಿತ್ತು. ಆ ವೇಳೆ ಶಿಕ್ಷಣಾಧಿಕಾರಿಗಳು ವಾರದ ಮೂರು ದಿನ ನಮ್ಮ ಶಾಲೆಗೆ ಬದಲಿ ಗುಮಾಸ್ತರನ್ನು ನಿಯೋಜನೆ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ತನಕ ನಮ್ಮ ಶಾಲೆಗೆ ಬದಲಿ ವ್ಯವಸ್ಥೆಯೂ ಆಗಿಲ್ಲ .ಈಗ ಮಹಾದೇವ ಅವರು ಕ್ಷೇತ್ರ ಶಿಕ್ಷಣ ಇಲಾಖೆಯಲ್ಲೂ ಇಲ್ಲ ಎಂದು ಆರೋಪಿಸಿದರು.

ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ ಶಾಸಕಿಯವರು ಈ ಕುರಿತು ಸಬೆಯಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮಹಾದೇವ ಅವರು 2 ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗದೆ ಕಾಣೆಯಾಗಿರುವ ವಿಚಾರ ಬಹಿರಂಗಗೊಂಡಿತು. ನಿಮ್ಮ ಕಾಲ ಬುಡದಲ್ಲಿರುವ ಕಚೇರಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಕಾಣೆಯಾಗಿ 2 ತಿಂಗಳು ಕಳೆದರೂ ನಿವ್ಯಾಕೆ ದೂರು ನೀಡಿಲ್ಲ ಎಂದು ಪ್ರಶ್ನಿಸಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಶಾಸಕಿಯವರು ಒಂದೋ ನಾಳೆಯಿಂದಲೇ ಅವರು ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಅವರನ್ನು ಕೆಲಸದಿಂದ ವಜಾಮಾಡಬೇಕು ,ಮಾತ್ರವಲ್ಲದೆ ಕೈಗೊಂಡ ಕ್ರಮದ ಕುರಿತು ತನಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಖಾಸಗಿ ಕಾವಲುಗಾರನಿಗೆ ಸರಕಾರಿ ಸಂಬಳ

ಇರ್ದೆ ಬೆಟ್ಟಂಪಾಡಿಯ ಪ್ರವಾಸೋದ್ಯಮ ಕ್ಷೇತ್ರವಾದ ಬೆಂದ್ರ್‌ತೀರ್ಥಕ್ಕೆ ಸಂಬಂಧಿಸಿದ 43 ಸೆಂಟ್ಸ್ ಸ್ಥಳ 5ಮಂದಿಯನ್ನೊಳಗೊಂಡ ಖಾಸಗಿ ಫ್ಯಾಮಿಲಿ ಟ್ರಸ್ಟೊಂದರ ಕೈಯಲ್ಲಿದೆ. ಅದರ ಪಹಣಿ ಪತ್ರ ಕೂಡ ಆ ಟ್ರಸ್ಟ್‌ನ ಹೆಸರಿನಲ್ಲಿದೆ. ಆದರೆ ಅಲ್ಲಿನ ಕಾವಲುಗಾರನಿಗೆ ಸರಕಾರದಿಂದ 8 ಸಾವಿರ ರೂ. ಮಾಸಿಕ ಸಂಬಳ ಪಾವತಿಯಾಗುತ್ತಿದೆ ಎಂದು ನಾಗರಾಜ್ ಭಟ್ ಸಭೆಯ ಗಮನ ಸೆಳೆದರು.

ಈ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಸಕಿ ಶಕುಂತಳಾ ಶೆಟ್ಟಿ, ಇದು ಸರಕಾರಿ ಪರಂಬೋಕು ಜಾಗವಾದ ಕಾರಣ ಮತ್ತು ಬೆಂದ್ರ್‌ತೀರ್ಥವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ಕನಸು ಸರಕಾರದ ಮುಂದಿರುವುದರಿಂದ ಇದನ್ನು ಸರಕಾರಿ ಇಲ್ಲವೇ ಸಾರ್ವಜನಿಕ ಟ್ರಸ್ಟ್ ಹೆಸರಿನಲ್ಲಿ ಮಾಡಬೇಕು. ಕಾವಲುಗಾರ ಏನು ಕೆಲಸ ಮಾಡುತ್ತಿದ್ದಾನೆ. ಯಾಕಾಗಿ ಆತನಿಗೆ ಸರಕಾರದಿಂದ ಸಂಬಳ ನೀಡಲಾಗುತ್ತಿದೆ ಎಂದು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.

ಮರಳು ಸಮಸ್ಯೆಯ ಬಗ್ಗೆ ಪ್ರಸ್ತಾಪ

ಸರಕಾರದ ಮರಳು ನೀತಿಯಿಂದ ಮನೆ ನಿರ್ಮಿಸುವ ಬಡಗರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದ್ದು, ಮನೆ ನಿರ್ಮಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ಸಭೆಯಲ್ಲಿ ವ್ಯಕ್ತವಾಯಿತು.

ಈ ವಿಚಾರವನ್ನೆತ್ತಿಕೊಂಡ ಶಾಸಕಿ ಶಕುಂತಳಾ ಶೆಟ್ಟಿ, 1.20 ಲಕ್ಷ ರೂ. ಸರಕಾರದ ಅನುದಾನ ಸಿಗುತ್ತದೆ ಎಂದು ಮನೆ ನಿರ್ಮಿಸಲು ಹೊರಟಿರುವ ಇಂದಿರಾ ಆವಾಜ್, ಬಸವ ಯೋಜನೆ ಮೊದಲಾದ ಯೋಜನೆಗಳ ಫಲಾನುಭವಿಗಳಿಗೆ ಮರಳು ನೀತಿಯಿಂದ ಸಮಸ್ಯೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಬಡವರು ಮನೆಯ ಬಳಿಯ ಹೊಳೆ, ತೋಡಿನ ಬದಿಯಿಂದ ಸ್ವಲ್ಪ ಪ್ರಮಾಣದಲ್ಲಿ ಮರಳು ತೆಗೆದರೂ ಅಧಿಕಾರಿಗಳು ಕೇಸು ದಾಖಲಿಸಿಕೊಳ್ಳುತ್ತಿದ್ದಾರೆ .ಆದರೆ ನಮ್ಮ ಕಣ್ಣ ಮುಂದೆಯೇ ಅಕ್ರಮವಾಗಿ ಲೋಡ್‌ಗಟ್ಟಲೆ ಮರಳು ಸಾಗಾಟವಾಗುತ್ತಿದೆ ಎಂದರು.

ಈ ಸಮಸ್ಯೆಯನ್ನು ಪ್ರತೀ ಬಾರಿಯೂ ಹೇಳುವುದಕ್ಕಿಂತ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮರಳಿಗೆ ಸಂಬಂಧಪಟ್ಟ ಸಭೆಯಲ್ಲಿ ಪ್ರಸ್ತಾಪಿಸಿ ಸರಕಾರದಿಂದ ಮನೆ ಪಡೆದುಕೊಂಡವರಿಗೆ ರಿಯಾಯಿತಿ ದರದಲ್ಲಿ ಮರಳು ಒದಗಿಸುವ ಕೆಲಸ ಮಾಡಬೇಕು. ಮರಳು ನೀತಿ ಏನೇ ಇರಲಿ, ಪಕ್ಷ ರಾಜಕೀಯ ಇಲ್ಲದೆ ಬಡವರಿಗೆ ಮರಳು ಸಿಗುವಂತೆ ಮಾಡಬೇಕು ಎಂದು ಸೂಚಿಸಿದರು.

ಸಂತೆ ಗೊಂದಲ-ಸಭೆ ಕರೆಯಲು ಸೂಚನೆ

ಪುತ್ತೂರಿನಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆ ಸ್ಥಳಾಂತರದ ವಿಚಾರವಾಗಿ ಧ್ವನಿ ಎತ್ತಿದ ಪುರಸಭಾ ಮಾಜಿ ಸದಸ್ಯ ಇಸಾಕ್ ಸಾಲ್ಮರ ಮತ್ತು ಜೆಡಿಎಸ್ ಮುಖಂಡ ಇಬ್ರಾಹೀಂ ಗೋಳಿಕಟ್ಟೆ, ಸಂತೆ ಸ್ಥಳಾಂತರದಿಂದಾಗಿ ಪೇಟೆಯ ವ್ಯವಹಾರವೇ ಕುಸಿದಿದ್ದು, ಇಲ್ಲಿನ ವ್ಯಾಪಾರಿಗಳಿಗೆ ಆರ್ಥಿಕ ಹೊಡೆತ ಬಿದ್ದಿದೆ. ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲದ ಕತ್ತರಿ ಸಾಣೆ, ಚಾಪೆ, ಬಳೆ,ಬುಟ್ಟಿ, ಕತ್ತಿ ಮಾರಾಟ ಮಾಡುವ ವ್ಯಾಪಾರಿಗಳನ್ನು ಕೂಡ ಪುತ್ತೂರು ಪೇಟೆಯಿಂದ ಓಡಿಸುವ ಕೆಲಸ ಪೊಲೀಸರಿಂದ ನಡೆದಿದೆ ಎಂದು ಆರೋಪಿಸಿದರು.

ಎಸಿಯವರು ಎಸಿ ರೂಮಿನಲ್ಲಿ ಕುಳಿತು ಮಾತನಾಡುತ್ತಿದ್ದಾರೆ. ಅವರಿಗೆ ಜನತೆಯ ಕಷ್ಟ ಅರ್ಥವಾಗುತ್ತಿಲ್ಲ ಎಂದು ಇಸಾಕ್ ಸಾಲ್ಮರ ಅವರು ದೂರಿದರು. ಈ ವಿಚಾರದಲ್ಲಿ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ, ಉಪವಿಭಾಗಾಧಿಕಾರಿ ಯಾವುದೋ ಉದ್ದೇಶದಿಂದ ಸಂತೆ ಸ್ಥಳಾಂತರ ಮಾಡಿರಬಹುದು. ಆದರೆ ಇದರಿಂದಾಗಿ ಕೆಲವರಿಗೆ ಅನ್ಯಾಯವಾಗಿದೆ ಎಂದ ಅವರು ಸಂತೆ ಸಮಸ್ಯೆಗೆ ಸಂಬಂಧಿಸಿ ಯಾರೇ ಅಧಿಕಾರಿಗಳನ್ನು ಹೊಣೆ ಮಾಡುವುದು ಬೇಡ. ಕೂಡಲೇ ಅಧ್ಯಕ್ಷರೊಂದಿಗೆ ಮಾತನಾಡಿ ಸಭೆ ಕರೆಯುವ ತೀರ್ಮಾನ ಮಾಡಿ ಎಂದು ಪೌರಾಯುಕ್ತರಿಗೆ ಸೂಚಿಸಿದರು.

ಸಂತೆ ಸ್ಥಳಾಂತರ ವಿಚಾರದಲ್ಲಿ ಆಸಕ್ತಿ ವಹಿಸುತ್ತಿರುವ ಅಧಿಕಾರಿಗಳು ಕೋರ್ಟು ರಸ್ತೆ ಅಗಲೀಕರಣದ ವಿಚಾರದಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕಿ ಶಕುಂತಳಾ ಶೆಟ್ಟಿ ಅವರು 2013ರ ಅಕ್ಟೋಬರ್ 6ರಂದು ಕೋರ್ಟುರಸ್ತೆ ಅಗಲೀಕರಣಕ್ಕೆ ಆಗಿನ ಅಧಿಕಾರಿಗಳು ಮುಂದಾಗಿದ್ದರು. ಆದರೆ ಆ ಅಧಿಕಾರಿಯ ವರ್ಗಾವಣೆಯ ಬಳಿಕ ಹಾಗೆಯೇ ಉಳಿದುಕೊಂಡಿದ್ದು, ಈ ವಿಚಾರದಲ್ಲಿ ನಗರಸಭೆಗೆ ಆಸಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.

ನಗರಾಭಿವೃದ್ಧಿ ಇಲಾಖೆಯಿಂದ ಅನುಮತಿ ಪಡೆದುಕೊಂಡು ಮಾಡಬೇಕಾಗಿದೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ಉತ್ತರಿಸಿದಾಗ ಶಾಸಕಿಯವರು ಕೋರ್ಟು ರಸ್ತೆಯ ಬದಿಯ ಅನಧಿಕೃತ ಕಟ್ಟಡಗಳನ್ನು ತೆಗೆಯುವುದಾದರೆ ಆದಷ್ಟು ಬೇಗ ತೆಗೆದು ಅಗಲೀಕರಣ ಮಾಡಬೇಕು ಎಂದು ಅವರಿಗೆ ಸೂಚಿಸಿದರು.

ತಹಶೀಲ್ದಾರ್ ಅನಂತಶಂಕರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಆಳ್ವ ಸಾಜ, ಶಿವರಂಜನ್, ಪರಮೇಶ್ವರ್, ಹರೀಶ್ ಬಿಜತ್ರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News