ರಕ್ತದಾನ ಮಾಡಲು ಹಿಂಜರಿಕೆ ಬೇಡ: ಅನುರಾಧ
ಉಡುಪಿ, ನ.5: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲೆ, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಲಯನ್ಸ್ ಕ್ಲಬ್, ಉಡುಪಿ ಮಿಡ್‌ಟೌನ್, ಎಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ ಇವುಗಳ ಸಹಯೋಗದೊಂದಿಗೆ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಸದಸ್ಯರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಣಿಪಾಲ ರಜತಾದ್ರಿಯ ಅಟಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ವಿಜ್ಞಾನ ಎಷ್ಟೆ ಮುಂದುವರೆದಿದ್ದರೂ ಈವರೆಗೆ ನಮಗೆ ಕೃತಕ ರಕ್ತ ತಯಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಕ್ತಕ್ಕೆ ಸಾಕಷ್ಟು ಮಹತ್ವ ನೀಡಲಾಗುತ್ತಿದೆ. ರಕ್ತದಾನ ಮಾಡಲು ಇರುವ ಹಿಂಜರಿಕೆಯನ್ನು ನಾವು ತೊರೆಯ ಬೇಕಾಗಿದೆ. ರಕ್ತದಾನ ಬಗ್ಗೆ ಯಾವುದೇ ಭಯಪಡುವ ಅಗತ್ಯವಿಲ್ಲ. ಇದರಿಂದ ಆರೋಗ್ಯಕ್ಕೆ ಲಾಭವೇ ಹೊರತು ಯಾವುದೇ ನಷ್ಟವಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಎಚ್‌ಡಿಎಫ್‌ಸಿ ಬ್ಯಾಂಕಿನ ಪ್ರಬಂಧಕ ಮನೋಜ್ ಪುತ್ರನ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಶೋಭಾ ಎಂ.ಹೆಗ್ಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಸ್ನೇಹ ಟ್ಯುಟೋರಿಯಲ್‌ನ ಉಮೇಶ್ ನಾಯ್ಕಾ ಭಾಗವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಅರುಣ್, ಕೋಶಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು. ಕಿರಣ್ ಹೆಗ್ಡೆ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.