ಸುಳ್ಯದಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆ: 94ಸಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ
ಸುಳ್ಯ, ನ.5: ಸುಳ್ಯ ತಾಲೂಕು ಪಂಚಾಯತ್ ಪಯಸ್ವಿನಿ ಸಭಾಂಗಣದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಭೆಯ ಔಚಿತ್ಯದ ಕುರಿತು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ತೀವ್ರ ಟೀಕೆ ವ್ಯಕ್ತವಾಯಿತು.
ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶುಭದಾ ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ತಹಶೀಲ್ದಾರ್ ಎಂ.ಎಂ.ಗಣೇಶ್ ವೇದಿಕೆಯಲ್ಲಿದ್ದರು. ಸಬೆ ಆರಂಭವಾಗುತ್ತಿದ್ದಂತೆ ಸಾರ್ವನಿಕರು ಅಹವಾಲು ನೀಡಬಹುದು ಎಂದು ಕಾರ್ಯನಿರ್ವಹಣಾಧಿಕಾರಿ ಹೇಳಿದರು.
ಆಗ ಎದ್ದು ನಿಂತ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ಈ ಹಿಂದೆ 5 ಬಾರಿ ಜನಸಂಪರ್ಕ ಸಭೆ ನಡೆದಿವೆ. ಆದರೆ ಸಾರ್ವಜನಿಕರು ನೀಡಿದ ಅಹವಾಲು ಏನಾಗಿದೆ ಎಂದು ವಿವರ ನೀಡಬೇಕು ಎಂದರು.
ಸಂಪಾಜೆ 33 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಕುರಿತು 17 ವರ್ಷಗಳಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. 5 ಬಾರಿ ಜನಸಂಪರ್ಕ ಸಭೆಯಲ್ಲೂ ಅಹವಾಲು ಸಲ್ಲಿಸಲಾಗಿದೆ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರೆ. ಹಾಗಿದ್ದೂ ಇನ್ನೂ ಜಮೀನು ಮೆಸ್ಕಾಂಗೆ ಹಸ್ತಾಂತರ ಆಗಿಲ್ಲ. ಅರಣ್ಯ ಇಲಾಖೆಯವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
94ಸಿಯಡಿ ಅರ್ಜಿ ಸಲ್ಲಿಸಿದ ಬಡ ಜನರಿಂದ ಗ್ರಾಮಕರಣಿಕರು 10ರಿಂದ 20 ಸಾವಿರ ಲಂಚ ಕೇಳುತ್ತಿದ್ದಾರೆ. ಇದಕ್ಕೆ ತನ್ನ ಬಳಿ ದಾಖಲೆಯೂ ಇದೆ. ಅಧಿಕಾರಶಾಹಿ ತೊಲಗಬೇಕು. ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಜಿ.ಕೆ. ಹಮೀದ್ ಆಕ್ರೋಶ ವ್ಯಕ್ತಪಡಿಸಿದರು. 2 ಎಕರೆ ಜಮೀನು ಮೆಸ್ಕಾಂಗೆ ಹಸ್ತಾಂತರಿಸುವ ಹಂತದಲ್ಲಿ ರಸ್ತೆ ಮಾರ್ಜಿನ್ ಕಾರಣದಿಂದ ಜಮೀನನ್ನು ಹಿಂದಿನ ಭಾಗಕ್ಕೆ ವಿಸ್ತರಿಸಿದಾಗ ಕೆಎಫ್‌ಡಿಸಿ ಜಮೀನು ಇರುವುದು ಗೊತ್ತಾಗಿ ಅವರಿಗೆ ಎನ್‌ಒಸಿಗೆ ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಉತ್ತರಿಸಿದರು.
ಅರಣ್ಯ ಇಲಾಖೆಗೆ ಪರ್ಯಾಯವಾಗಿ 2 ಎಕರೆ ಕಂದಾಯ ಜಮೀನನ್ನು ಅಜ್ಜಾವರ ಗ್ರಾಮದಲ್ಲಿ ನೀಡಲಾಗಿದೆ. ಹಾಗಿದ್ದೂ ಹಸ್ತಾಂತರ ತಡವಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ಶಾಸಕರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ತಾಲೂಕು ಪಂಚಾಯತ್‌ನಲ್ಲಿ ನಡೆಸಿ ಇತ್ಯರ್ಥ ಪಡಿಸುವುದೆಂದು ನಿರ್ಣಯಿಸಲಾಯಿತು.
ಕಲ್ಚರ್ಪೆ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ವಾರದಲ್ಲಿ ಸರಿಪಡಿಸದಿದ್ದರೆ ತ್ಯಾಜ್ಯದ ಟ್ರಾಕ್ಟರ್‌ನ್ನು ತಡೆದು ಧರಣಿ ನಡೆಸಲಾಗುವುದು ಎಂದು ರಾಧಾಕೃಷ್ಣ ಪರಿವಾರಕಾನ ಎಚ್ಚರಿಸಿದರು.