×
Ad

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಿದ್ಧತೆ: ದ.ಕ.ಜಿಲ್ಲಾಧಿಕಾರಿಯಿಂದ ದಿಟ್ಟ ನಿರ್ದೇಶನ

Update: 2016-11-05 18:33 IST

ಮಂಗಳೂರು, ನ.5: ಕಳೆದ ಬೇಸಿಗೆಯಲ್ಲಿ ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಾದ್ಯಂತ ಎದುರಿಸಲಾದ ನೀರಿನ ತೀವ್ರ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಬಾರಿ ಈಗಾಗಲೇ ಜಿಲ್ಲಾಡಳಿತ ಸಮರ್ಪಕ ಸಿದ್ಧತೆಗಳಿಗೆ ಮುಂದಾಗಿದೆ. ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಎಲ್ಲಾ ಅಣೆಕಟ್ಟುಗಳಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹವನ್ನು ಖಾತರಿಪಡಿಸಲು ಸೂಚಿಸುವ ಜತೆಗೆ ದ.ಕ. ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಹಲವಾರು ದಿಟ್ಟ ನಿರ್ದೇಶನಗಳನ್ನು ಅಧಿಕಾರಿಗಳು ಹಾಗೂ ಕೈಗಾರಿಕೆಗಳಿಗೆ ನೀಡಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಈ ಬಗ್ಗೆ ಜಿಲ್ಲೆಯ ಪ್ರಮುಖ ಕೈಗಾರಿಕೆಗಳ ಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆಗಳನ್ನು ನೀಡಿದರು.

ಡಿಸೆಂಬರ್ ಅಂತ್ಯದೊಳಗೆ ಖಾಸಗಿ ಅಣೆಕಟ್ಟು ಸೇರಿದಂತೆ ಜಿಲ್ಲೆಯ ಎಲ್ಲಾ ಅಣೆಕಟ್ಟುಗಳಲ್ಲಿಯೂ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹವನ್ನು ಖಾತರಿಪಡಿಸಬೇಕು. ಮಾತ್ರವಲ್ಲದೆ ಈ ಸಂಗ್ರಹವಾದ ನೀರಿನಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಉತ್ಪಾದನೆ ಮಾಡುವುದಾದಲ್ಲಿ ಜಿಲ್ಲಾಡಳಿತದ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಈ ಬಗ್ಗೆ ಕಿರು ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ನಿಗಾ ವಹಿಸಬೇಕು. ಒಂದು ವೇಳೆ ಗರಿಷ್ಠ ನೀರು ಸಂಗ್ರಹವಾದ ಬಳಿಕವೂ ಒಳ ಹರಿವು ಇದಲ್ಲಿ ಮಾತ್ರವೇ ಕಂಪನಿಗಳು ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಮನಪಾ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ನೀರಿನ ಮಿತ ಬಳಕೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಅವರು ಈ ಸಂದರ್ಭ ಸಲಹೆ ನೀಡಿದರು. ಸರಕಾರಿ ಯೋಜನೆಗಳನ್ನು ಹೊರತುಪಡಿಸಿ ಬೋರ್‌ವೆಲ್‌ಗೆ ಅವಕಾಶವಿಲ್ಲ

ಸರಕಾರದ ಕುಡಿಯುವ ನೀರಿನ ಯೋಜನೆಗಳಿಗೆ ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯಲು ಅವಕಾಶವಿಲ್ಲ. ಸರಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಸಭೆಯಲ್ಲಿ ಸ್ಪಷ್ಟಪಡಿಸಿದರು.

ತುಂಬೆ ಹೊಸ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರು ಸಂಗ್ರಹ

ತುಂಬೆಯ ಹೊಸ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರು ಸಂಗ್ರಹಿಸಲು 47 ಎಕರೆ ಭೂಮಿಯನ್ನು ಭೂಸ್ವಾಧೀನ ಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸಂತ್ರಸ್ತರ ಸಭೆಯನ್ನು ಕರೆದು ಸೂಕ್ತ ಕ್ರಮವನ್ನು ಮುಂದಿನ ವಾರ ಕೈಗೊಳ್ಳಲಾಗುವುದು. ಡಿಸೆಂಬರ್ 15ರೊಳಗೆ 5 ಮೀಟರ್‌ರವೆಗೆ ನೀರು ಸಂಗ್ರಹವನ್ನು ಮಾಡುವ ಮೂಲಕ ನಗರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಉಳಿದಂತೆ ಡ್ಯಾಂನಲ್ಲಿ 7 ಮೀಟರ್‌ವರೆಗೆ ನೀರು ಸಂಗ್ರಹದ ಬಗ್ಗೆಯೂ ಪ್ರಕ್ರಿಯೆಗಳನ್ನು ಮುಂದುವರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಎಎಂಆರ್ ಡ್ಯಾಂ, ತುಂಬೆ ಡ್ಯಾಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸುವುದರಿಂದ ನಗರದಲ್ಲಿ ಮೂರು ತಿಂಗಳಿಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. 

ಜಿಲ್ಲಾಧಿಕಾರಿಯ ಪ್ರಮುಖ ಸೂಚನೆಗಳು

ನವೆಂಬರ್ 15ರೊಳಗೆ ತುಂಬೆಯ ಹಳೆ ಅಣೆಕಟ್ಟಿಗೆ ಗೇಟುಗಳನ್ನು ಅಳವಡಿಸಬೇಕು.

ಡಿಸೆಂಬರ್ 15ರೊಳಗೆ ತುಂಬೆಯ ಹೊಸ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರು ನಿಲ್ಲಿಸಲು ಕ್ರಮ.

ಜನವರಿ ತಿಂಗಳಿನಿಂದ ಜಿಲ್ಲೆಯ ಯಾವುದೇ ನದಿ ಅಥವಾ ಅಣೆಕಟ್ಟುಗಳಿಂದ ಕೃಷಿ ಚಟುವಟಿಕೆಗಳಿಗೆ ನೀರು ಉಪಯೋಗಿಸಬಾರದು.

ಜನವರಿಯಿಂದ ಭತ್ತ ಸೇರಿದಂತೆ ಇತರ ಕೃಷಿ ಬೆಳೆಗಳಿಗೆ ನೀರು ಪೂರೈಸುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಬೇಕು.

ಅಡಿಕೆ ಮೊದಲಾದ ತೋಟಗಾರಿಕಾ ಬೆಳೆಗಳಿಗೆ ಅತೀ ಕಡಿಮೆ ನೀರಿನ ಅಗತ್ಯ ಇರುವುದರಿಂದ ಈ ಸಂದರ್ಭ ಹನಿ ನೀರಾವರಿ ಅಥವಾ ಸ್ಪ್ರಿಂಕ್ಲರ್‌ಗಳನ್ನು ಉಪಯೋಗಿಸುವವರಿಗೆ ಮಾತ್ರ ಅವಕಾಶ ನೀಡಬೇಕು.

ಎಲ್ಲಾ ಗ್ರಾ.ಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ತೆರೆದ ಬಾವಿ ಹಾಗೂ ಬೋರ್‌ವೆಲ್ ಸೇರಿದಂತೆ ಖಾಸಗಿ ನೀರಿನ ಮೂಲಗಳನ್ನು ಗುರುತಿಸಿ ಸ್ವಾಧೀನ ಪಡಿಸಿಕೊಳ್ಳಬೇಕು.

ಬರದ ಸೂಚನೆ ಇರುವಾಗ ಖಾಸಗಿ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿ ನೀರು ಪೂರೈಕೆಯ ಪರ್ಯಾಯ ವ್ಯವಸ್ಥೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಎಪ್ರಿಲ್‌ನಲ್ಲಿ ಎಂಆರ್‌ಪಿಎಲ್- ಐಒಸಿಎಲ್‌ಗೆ ವಾರ್ಷಿಕ ನಿಲುಗಡೆಗೆ ಸಲಹೆ

ರಾಷ್ಟ್ರವ್ಯಾಪಿಯಾಗಿ ಅಡುಗೆ ಅನಿಲ ಸೇರಿದಂತೆ ಇಂಧನ ಪೂರೈಕೆಯಲ್ಲಿ ಪ್ರಮುಖ ಸಂಸ್ಥೆಯಾಗಿರುವ ಎಂಆರ್‌ಪಿಎಲ್, ಐಒಸಿಎಲ್ ಹಾಗೂ ರಸಗೊಬ್ಬರಗಳನ್ನು ಪೂರೈಸುವ ಎಂಸಿಎಫ್ ಕಂಪನಿಗಳು ತಮ್ಮ ವಾರ್ಷಿಕ ಚಟುವಟಿಕೆ ನಿಲುಗಡೆಯನ್ನು ಎಪ್ರಿಲ್ ತಿಂಗಳಲ್ಲಿ ಮಾಡುವ ಮೂಲಕ ಜಿಲ್ಲೆಯ ಜನರ ನೀರಿನ ಸಮಸ್ಯೆಗೆ ಸಹಕರಿಸಬೇಕೆಂದು ಸಲಹೆ ನೀಡಿದರು.

ಕುಡಿಯುವ ನೀರಿನಂತೆ ಇಂಧನ ಪೂರೈಕೆ ಹಾಗೂ ರಸಗೊಬ್ಬರದ ಪೂರೈಕೆಯಲ್ಲಿ ವಿತರಣೆಯಲ್ಲಿ ವ್ಯತ್ಯಯವಾದಲ್ಲಿ ಜನಸಾಮಾನ್ಯರಿಗೂ ಅದರ ಬಿಸಿ ತಟ್ಟಲಿರುವುದರಿಂದ ಈ ಪ್ರಮುಖ ಕಂಪನಿಗಳ ಕಾರ್ಯನಿರ್ವಹಣೆಗೆ ನೀರಿನ ಬಳಕೆ ಅಗತ್ಯವಾಗಿರುತ್ತದೆ. ಹಾಗಾಗಿ ಕಂಪನಿಗಳು ಸಂಸ್ಕರಿಸಿದ ನೀರಿನ ಬಳಕೆಗೆ ಪ್ರಮುಖ ಆದ್ಯತೆ ನೀಡಬೇಕು. ಎಪ್ರಿಲ್ ತಿಂಗಳಲ್ಲಿ ತಮ್ಮ ವಾರ್ಷಿಕ ಚಟುವಟಿಕೆಯನ್ನು ನಿಲುಗಡೆ ಮಾಡುವ ಮೂಲಕ ಸಹಕರಿಸಬೇಕು. ಮಾತ್ರವಲ್ಲದೆ, ನೀರಿನ ಸಂಗ್ರಹಕ್ಕೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಕಳೆದ ಬಾರಿ ನೀರಿನ ಸಮಸ್ಯೆ ಎದುರಾಗಿದ್ದ ಸಂದರ್ಭದಲ್ಲೂ ಜಿಲ್ಲಾಡಳಿತದ ನಿರ್ದೇಶನದ ಹೊರತಾಗಿಯೂ ಎಎಂಆರ್ ಡ್ಯಾಂನಿಂದ ಕೈಗಾರಿಕೆಗಳಿಗೆ ನೀರು ಬಿಡಲಾಗಿದೆ ಎಂಬ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ರೀತಿಯ ಅನುಚಿತ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News