ಅನಧಿಕೃತ ಗ್ಯಾಸ್ ಸಿಲಿಂಡರ್ ಗೋಡೌನ್ ತೆರವಿಗೆ ಆಗ್ರಹಿಸಿ ದಸಂಸ ಧರಣಿ

Update: 2016-11-05 13:11 GMT

ಉಡುಪಿ, ನ.5: ಪಡುಬಿದ್ರೆ ಪಾದೆಬೆಟ್ಟುವಿನ ದಲಿತ ಕಾಲನಿಯ ಮಧ್ಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅನಧಿಕೃತ, ಪರವಾನಿಗೆ ರಹಿತ, ಅಪಾಯಕಾರಿ, ಅಕ್ರಮ ಗ್ಯಾಸ್ ಸಿಲಿಂಡರ್ ದಾಸ್ತಾನು ಗೋಡೌನ್ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಪಡುಬಿದ್ರೆ ಗ್ರಾಮ ಶಾಖೆಯ ನೇತೃತ್ವದಲ್ಲಿ ಶನಿವಾರ ಉಡುಪಿ ತಾಪಂ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಶಾಖೆಯ ಸಂಚಾಲಕ ಲೋಕೇಶ್ ಪಡುಬಿದ್ರೆ, ಪಾದೆಬೆಟ್ಟು ಗ್ರಾಮದ ದಲಿತ ಕಾಲನಿಯ ಮಧ್ಯಭಾಗದಲ್ಲಿ ಭಾರತ್ ಗ್ಯಾಸ್ ಏಜೆನ್ಸಿಯ ಸಿಲಿಂಡರ್ ದಾಸ್ತಾನು ಗೋಡೌನಿಗೆ ದಲಿತರ ಆಕ್ಷೇಪಣೆಗಳಿದ್ದರೂ ಪೆಟ್ರೋಲಿಯಂ ಮತ್ತು ಎಕ್ಸ್‌ಪ್ಲೋಸಿವ್ ಇಲಾಖೆ ಸ್ಥಳೀಯ ಗ್ರಾಪಂ ಹಾಗೂ ಇತರ ಇಲಾಖೆಗಳ ಪರವಾನಿಗೆಯನ್ನು ಪರಿಗಣಿಸದೆ 2011ರಿಂದ 2016ರ ಸೆಪ್ಟೆಂಬರ್ ತಿಂಗಳವರೆಗೆ ಪರವಾನಿಗೆ ನೀಡಿದೆ. ಇದೀಗ ಇದರ ಪರವಾನಿಗೆ ಅವಧಿ ಮುಗಿದಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೋಡಾನ್ ತೆರವುಗೊಳಿಸುವಂತೆ ಪಡುಬಿದ್ರೆ ಗ್ರಾಪಂಗೆ ಆದೇಶ ನೀಡಿದೆ ಎಂದರು.

ಅ.7ರಂದು ಮತ್ತು 17ರಂದು ಗ್ರಾಪಂ ಅಧಿಕಾರಿಗಳು ಗೋಡೌನ್ ತೆರವಿಗೆ ಎರಡು ಬಾರಿ ಏಳು ದಿನಗಳ ಗಡುವು ನೀಡಿ ನೋಟಿಸ್ ಜಾರಿ ಮಾಡಿದ್ದರು. ಅ.18ರಂದು ಉಡುಪಿ ತಾಪಂ ಅಧ್ಯಕ್ಷೆ ಈ ಬಗ್ಗೆ ಯಾವುದೇ ಪರಿಶೀಲನೆ ನಡೆಸದೆ ಈ ನೋಟಿಸ್‌ಗೆ ತಡೆಯಾಜ್ಞೆ ನೀಡಿ, ಪಿಡಿಒ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಿಂದ ಈ ಗೋಡೌನ್ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎಂದು ಅವರು ಆರೋಪಿಸಿದರು.

ಬೇಜವಾಬ್ದಾರಿತನ, ಕರ್ತವ್ಯ ನಿರ್ವಹಣೆಯಲ್ಲಿನ ದುರ್ವರ್ತನೆ ಹಾಗೂ ಅಲಕ್ಷ ಮತ್ತು ದಲಿತ ದೌರ್ಜನ್ಯಕ್ಕಾಗಿ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ತಾಪಂ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪಾಯಕಾರಿಯಾಗಿರುವ ಈ ಗೋಡೌನ್‌ನ್ನು ಕೂಡಲೇ ತೆರವುಗೊಳಿಸಲು ಆದೇಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಕುರಿತ ಮನವಿಯನ್ನು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ದಸಂಸ ಮುಖಂಡರಾದ ಸುಂದರ ಮಾಸ್ಟರ್, ಎಸ್.ಎಸ್.ಪ್ರಸಾದ್, ಪರಮೇಶ್ವರ ಉಪ್ಪೂರು, ಪ್ರಶಾಂತ್ ತೊಟ್ಟಂ, ಶಂಕರ್‌ದಾಸ್, ಅಣ್ಣಪ್ಪ ಕೊಳಲಗಿರಿ, ವಿಮಲ ಅಂಚನ್, ಸುಮತಿ, ಕರವೇ ಮುಖಂಡ ಅನ್ಸಾರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News