ಖಾಸಗಿ ಸಂಘಟನೆಯಿಂದ ಟಿಪ್ಪು ಜಯಂತಿ: ಮುನ್ನೆಚ್ಚರಿಕಾ ಕ್ರಮವಾಗಿ ಪರ, ವಿರೋಧಿ ಮುಖಂಡರಿಂದ ಬಾಂಡ್

Update: 2016-11-05 13:46 GMT

ಪುತ್ತೂರು, ನ.5: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.10ರಂದು ಖಾಸಗಿ ಸಂಘಟನೆಯೊಂದು ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಿರುವ ಹಾಗೂ ವಿರೋಧಿಸಲು ಉದ್ದೇಶಿಸಿರುವ ಎಲ್ಲಾ ಸಂಘಟನೆಗಳ ಮುಖಂಡರಿಂದಲೂ 10 ಲಕ್ಷ ರೂ. ಮೊತ್ತದ ಬಾಂಡ್ ಪಡೆಯುವವಂತೆ ಪುತ್ತೂರು ತಹಶೀಲ್ದಾರ್ ಅನಂತ ಶಂಕರ್ ಆದೇಶ ಹೊರಡಿಸಿದ್ದಾರೆ.

2015ರಲ್ಲಿ ಟಿಪ್ಪುಜಯಂತಿ ಆಚರಣೆ ಸಂದರ್ಭ ಪುತ್ತೂರು ಸುತ್ತಮುತ್ತ ನಡೆದ ಗಲಭೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯುಂಟಾಗಿದ್ದು, ಈ ಬಾರಿ ಶಾಂತಿ ಕಾಪಾಡುವ ಉದ್ದೇಶದಿಂದ ತಹಶೀಲ್ದಾರ್ ಈ ಆದೇಶ ನೀಡಿದ್ದಾರೆ.

ಟಿಪ್ಪುಜಯಂತಿ ಪರ ಹಾಗೂ ವಿರೋಧವಾಗಿ ಕಾರ್ಯಾಚರಣೆ ನಡೆಸುವ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ನಾಯಕರ ಬಗ್ಗೆ ಪುತ್ತೂರು ತಹಶೀಲ್ದಾರರು ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ನ.3ರಂದು ಬಾಂಡ್ ನೀಡುವಂತೆ ಮುಖಂಡರಿಗೆ ನೋಟಿಸ್ ನೀಡಿದ್ದಾರೆ. ನ.5ರ ಒಳಗಾಗಿ ನೋಟಿಸ್‌ನೊಂದಿಗೆ ತಹಶೀಲ್ದಾರರನ್ನು ಭೇಟಿಯಾಗಿ ಬಾಂಡ್‌ಗೆ ಸಹಿ ಹಾಗೂ ಮುಚ್ಚಳಿಕೆ ನೀಡಬೇಕೆಂದು ಸೂಚಿಸಲಾಗಿದೆ. ಇದಕ್ಕೆ ಒಪ್ಪದೇ ಇದ್ದಲ್ಲಿ ಟಿಪ್ಪು ಜಯಂತಿ ಮುಕ್ತಾಯದವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಚರಣೆಗಳಿಂದ ಸಾರ್ವಜನಿಕ ಆಸ್ತಿಗಳಿಗೆ ಧಕ್ಕೆಯಾಗುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಹಲವರಲ್ಲಿ ಬಾಂಡ್ ಸಹಿತ ಮುಚ್ಚಳಿಕೆ ಪಡೆಯಲು ತೀರ್ಮಾನಿಸಲಾಗಿದೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ತಾಲೂಕಿನಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಅನಂತ ಶಂಕರ್ ತಿಳಿಸಿದ್ದಾರೆ.

ತಹಶೀಲ್ದಾರ್ ಕಚೇರಿಯಿಂದ ಟಿಪ್ಪು ಜಯಂತಿ ಆಚರಣೆ ಹಾಗೂ ಆಚರಣೆ ವಿರೋಧಿ ಗುಂಪುಗಳಲ್ಲಿರುವ ಜನರ ಮಾಹಿತಿ ಕೇಳಲಾಗಿತ್ತು, ತಹಶೀಲ್ದಾರ್ ಅವರ ಆದೇಶದ ಹಿನ್ನೆಲೆಯಲ್ಲಿ ಹಲವರ ಹೆಸರನ್ನು ಪಟ್ಟಿ ಮಾಡಿ ನೀಡಲಾಗಿದೆ ಎಂದು ಪುತ್ತೂರು ನಗರ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News