×
Ad

ಪಿ.ಎ.ಕಾಲೇಜಿನಲ್ಲಿ ಟೆಕ್ ಎಕ್ಸ್‌ಪೊ ಸಮಾರೋಪ

Update: 2016-11-05 19:25 IST

ಕೊಣಾಜೆ, ನ.5: ವಿದ್ಯಾರ್ಥಿ ಜೀವನವು ನಮ್ಮ ಬದುಕಿನ ಬಹು ಅಮೂಲ್ಯವಾದ ಘಟ್ಟವಾಗಿದ್ದು ಈ ಹಂತವು ನಮ್ಮ ಜೀವನ ಪಥದ ದಿಕ್ಕನ್ನು ರೂಪಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಪ್ರತಿಯೊಂದು ವಸ್ತು ವಿಷಯವನ್ನು ಸಂಶೋಧಿಸುವ ಮನೋಭಾವನೆಯ ಮೂಲಕ ಜ್ಞಾನ ಕೌಶಲ್ಯದೊಂದಿಗೆ ದೇಶದ ಸಂಪತ್ತಾಗಿ ರೂಪುಗೊಳ್ಳಬೇಕು ಎಂದು ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಹೇಳಿದ್ದಾರೆ.

ಪಿ.ಎ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮಟ್ಟದ ಅಂತರ್‌ಕಾಲೇಜು ಸ್ಪರ್ಧೆ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಮೊಬೈಲ್ ಎನ್ನುವುದು ನಮಗೆ ಜ್ಞಾನ ವಿಸ್ತರಣೆಗೆ ಮಾತ್ರ ಬಳಕೆಯಾಗಬೇಕೇ ವಿನಃ ನಮ್ಮ ಅಮೂಲ್ಯ ಬದುಕನ್ನು ಕಸಿಯುವಂತಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ಮಾತನಾಡಿ, ಜೀವನದ ಹಾದಿಯಲ್ಲಿ ಯಾವತ್ತೂ ಯಶಸ್ಸು ಸಿಗಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಜೀವನದಲ್ಲಿ ವಿಫಲರಾಗುವುದೂ ಇದೆ. ಆದರೆ ಎಂತಹ ಕಠಿಣ ಸವಾಲುಗಳನ್ನೂ ನಮ್ಮಲ್ಲಿರುವ ಜ್ಞಾನ ಮತ್ತು ಕೌಶಲ್ಯದ ಮೂಲಕ ಎದುರಿಸಿ ಜೀವನದಲ್ಲಿ ಯಶಸ್ಸನ್ನು ಕಾಣುವ ಮನೋಭಾವ ನಮ್ಮದಾಗಬೇಕು. ಭಾರತವು ಅತೀ ಹೆಚ್ಚು ಯುವಜನಾಂಗವನ್ನು ಹೊಂದಿರುವ ರಾಷ್ಟ್ರವಾಗಿದೆ. ಇದಕ್ಕೆ ಸಮಾನವಾಗಿ ತಂತ್ರಜ್ಞಾನವೂ ಕೂಡಾ ಬೆಳೆಯುತ್ತಿದೆ. ತಂತ್ರಜ್ಞಾನಗಳನ್ನು ನ್ಯಾಯಯುತವಾಗಿ ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡು ಯುವ ಸಮುದಾಯ ಮುನ್ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿ.ಎ. ಕಾಲೇಜು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ.ಸರ್ಫರಾಝ್ ಹಾಸಿಂ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಟಿ.ಜಿ. ಆಂಟನಿ, ಎಂಬಿಎ ವಿಭಾಗದ ನಿರ್ದೇಶಕ ಪ್ರೊ.ಬಿರಾನ್ ಮೊಯ್ದಿನ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಪ್ರೊ.ಅಮೀನ್ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರ ವಿವರ ತಿಳಿಸಿದರು. ಇಎಲ್‌ಸಿಯ ಸಹಪ್ರಾಧ್ಯಾಪಕಿ ಪ್ರೊ.ಶಮ್ನಾ ವರದಿ ವಾಚಿಸಿದರು. ಜಿಶಾ ಸ್ವಾಗತಿಸಿ, ಸಂಯೋಜಕ ಪ್ರೊ.ನಬೀಲ್ ಅಹ್ಮದ್ ವಂದಿಸಿದರು. ಹಕೀಬ್ ಇಸ್ಮಾಯೀಲ್ ಕಾರ್ಯಕ್ರಮ ನಿರೂಪಿಸಿದರು.

ಪಿಯುಸಿ, ಪಿಡಿಸಿ, ಪ್ಲಸ್ ಒನ್ ಹಾಗೂ ಪ್ಲಸ್ ಟು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಟೆಕ್ ಎಕ್ಸ್‌ಪೊ ರಾಷ್ಟ್ರೀಯ ಅಂತರ್ ಕಾಲೇಜು ವಿವಿಧ ತಾಂತ್ರಿಕ ಸ್ಪರ್ಧೆಗಳಲ್ಲಿ ವಿವಿಧ ಪಿಯು ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.

ಮಂಗಳೂರಿನ ಶಾರದಾ ಕಾಲೇಜು ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡರೆ, ಕೊಡಿಯಾಲ್‌ಬೈಲ್‌ನ ಸೈಂಟ್ ಅಲೋಶಿಯಸ್ ಕಾಲೇಜು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News