ನನ್ನನ್ನು ಪಕ್ಷದಿಂದ ಉಚ್ಛಾಟಿಸುವ ನೈತಿಕತೆ ಶಾಸಕರಿಗಿಲ್ಲ: ಮೇಘನಾಥ ಶೆಟ್ಟಿ

Update: 2016-11-05 14:22 GMT

ಮೂಡುಬಿದಿರೆ, ನ.5: ತಾನು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತನಾಗಿ ದುಡಿದಿದ್ದೇನೆ. ಇದೀಗ ಕಾಂಗ್ರೆಸ್ ಪಕ್ಷಕ್ಕೆ 11 ತಿಂಗಳ ಹಿಂದೆಯೇ ರಾಜಿನಾಮೆ ನೀಡಿದ್ದೇನೆ. ಆದರೆ ಕೆಪಿಸಿಸಿ ಅಧ್ಯಕ್ಷರು ಅದನ್ನು ಅಂಗೀಕರಿಸಿಲ್ಲ. ನನ್ನನ್ನು ಉಚ್ಛಾಟನೆ ಮಾಡಲು ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸದಸ್ಯತನ ನೋಂದಣಿಯೇ ಆಗಿಲ್ಲ. ನನ್ನನ್ನು ಉಚ್ಛಾಟಿಸುವ ನೈತಿಕತೆ ಸ್ಥಳೀಯ ಶಾಸಕರಿಗಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ ಹೇಳಿದ್ದಾರೆ. 

ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ನಾನು ಮತ್ತು ನನ್ನ ಬೆಂಬಲಿಗರು ರಾಜಕೀಯದಲ್ಲಿ ದುಡಿಯುತ್ತಿದ್ದೇವೆ. 1999ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅ್ಯರ್ಥಿಯಾಗಿದ್ದ ಅಭಯಚಂದ್ರರ ಪರಿಚಯ ಕ್ಷೇತ್ರದಲ್ಲಿರಲಿಲ್ಲ. ಅವರನ್ನು ಹಳ್ಳಿ ಹಳ್ಳಿಗೆ ಕರೆದುಕೊಂಡು ಹೋಗಿ ಜನರಿಗೆ ಪರಿಚಯಿಸಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಅವರನ್ನು ಗೆಲ್ಲಿಸಿದೆವು. ಮೂಡುಬಿದಿರೆ ತಾಲೂಕಾಗಬೇಕು, ಒಳಚರಂಡಿ ಯೋಜನೆ ಕಾರ್ಯರೂಪಕ್ಕೆ ತರಬೇಕು. ಮುಲ್ಕಿ ಮತ್ತು ಮೂಡುಬಿದಿರೆಯಲ್ಲಿ ಸರಕಾರಿ ಕಾಲೇಜು ಸ್ಥಾಪಿಸಬೇಕು, ಮೂಡುಬಿದಿರೆಗೆ ಸುಸಜ್ಜಿತ ಮಾರ್ಕೆಟ್ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದು ನಾಲ್ಕು ಅವಧಿಗೆ ಅವರೇ ಶಾಸಕರಾಗಿದ್ದರೂ ಈ ಬೇಡಿಕೆಗಳು ಇನ್ನೂ ಈಡೇರಿಲ್ಲ. ರಾಜಕೀಯವನ್ನು ವ್ಯಾಪಾರೀಕರಣ ಮಾಡುವುದರಲ್ಲೇ ಕಾಲಹರಣ ಮಾಡುತ್ತಿರುವ ಶಾಸಕರು ಬಡಜನರಲ್ಲಿ ತಮ್ಮ ದರ್ಪವನ್ನು ತೋರಿಸಿ ಕಾರ್ಯಕರ್ತರನ್ನು ಬೆದರಿಸಿ ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡದೆ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಶಕ್ತರಾಗಿದ್ದಾರೆ ಎಂದು ಆರೋಪಿಸಿದರು.

4 ಬಾರಿ ಅವರನ್ನು ಗೆಲ್ಲಿಸಲು ಕಾರಣರಾದ ಬಹುಸಂಖ್ಯೆಯ ಸಮುದಾಯದ ಒಬ್ಬರನ್ನೊಬ್ಬರನ್ನು ಎತ್ತಿ ಕಟ್ಟಿ ರಾಜಕೀಯ ಚದುರಂಗ ಆಟವಾಡುತ್ತಿದ್ದಾರೆ. ಇವರು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗಿದೆ. ಮುಲ್ಕಿ ವಲಯದಲ್ಲಿ ಒಬ್ಬ ಬಂಟ, ಇಬ್ಬರು ಬಿಲ್ಲವರ ಕೊಲೆಯಾಯಿತು. ಕಳೆದ ವರ್ಷ ಮೂಡುಬಿದಿರೆಯಲ್ಲಿ ಯುವ ಬಿಲ್ಲವನ ಕೊಲೆಯಾಯಿತು. ಈ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಮುಲ್ಕಿಯಲ್ಲಿ ಎರಡು ಅಂಗಡಿಗಳು, ಮೂಡುಬಿದಿರೆಯಲ್ಲಿ ಆರು ಮುಸ್ಲಿಂ ಸಮುದಾಯದ ಮತ್ತು ಎರಡು ಅನ್ಯ ಕೋಮಿನ ಅಂಗಡಿಗಳಿಗೆ ಹಾನಿಯಾಗಿತ್ತು. ಈ ಸಂತ್ರಸ್ತರಿಗೆ ಸಾಂತ್ವನ ಹೇಳುವ ಕೆಲಸವನ್ನು ಶಾಸಕರು ಮಾಡಿಲ್ಲ. ಈ ಎಲ್ಲಾ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ಮತ್ತು ಇತರ ಸರಕಾರಿ ಅಧಿಕಾರಿಗಳನ್ನು ಬೆದರಿಸಿ ನ್ಯಾಯ ದೊರಕದಂತೆ ಮಾಡಿದ್ದಾರೆ ಎಂದು ಆರೋಪಿಸಿದರು. 

ನನಗೆ ರಾಜಕೀಯ ಉದ್ಯೋಗ ಅಲ್ಲ. ಉದ್ಯಮಿಯಾಗಿ ಬಂದ ಆದಾಯದಿಂದ ರಾಜಕೀಯದ ಕೆಲಸ ಮಾಡುತ್ತಿದ್ದೇನೆ. ಬಡ ಕಾರ್ಯಕರ್ತರನ್ನು ಕಟ್ಟಿಕೊಂಡು ಪಕ್ಷವನ್ನು ಬೆಳೆಸಿದ್ದೇನೆ. ಕಳೆದ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ನಾನು ಮತ್ತು ನನ್ನ ಬೆಂಬಲಿಗರು ತಟಸ್ಥ ಧೋರಣೆ ತಳೆದುದರಿಂದ ಕಾಂಗ್ರೆಸ್ ಪಕ್ಷವು ಐದು ಜಿ.ಪಂ ಮತ್ತು ಹದಿನೈದು ತಾ.ಪಂ. ಸೀಟ್‌ಗಳನ್ನು ಕಳೆದುಕೊಂಡಿದೆ. ಈ ಕ್ಷೇತ್ರದ ಜನರು ನನಗೆ ರಾಜಕೀಯ ಕ್ಷೇತ್ರದಲ್ಲಿ ಎಲ್ಲಿಯವರೆಗೆ ಆಶೀರ್ವಾದ ಮಾಡುತ್ತಾರೆಯೋ ಅಲ್ಲಿಯವರೆಗೆ ರಾಜಕೀಯದಲ್ಲಿ ದುಡಿಯುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಶೆಟ್ಟಿ ಮಜಲೋಡಿ, ಫಯಾಝ್ ಅಲಂಗಾರ್, ಉಮಾನಾಥ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News