ಕೆ.ಜಿ.ಬಾಲಕಿಗೆ ಲೈಂಗಿಕ ದೌರ್ಜನ್ಯ : ಇಬ್ಬರು ಶಿಕ್ಷಕಿಯರ ಬಂಧನ
ಪಟ್ನಾ,ನ.5: ಕೆ.ಜಿ.ತರಗತಿಯ ಬಾಲಿಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅರೋಪದಲ್ಲಿ ಇಲ್ಲಿಯ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯೊಂದರ ಶಿಕ್ಷಕಿಯರಿಬ್ಬರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ ಎಂದು ನಗರ ಎಸ್‌ಪಿ ಚಂದನ್ ಖುಶ್ವಾಹ್ ಅವರು ಸುದ್ದಿಸಂಸ್ಥೆಗೆ ತಿಳಿಸಿ ದರು.
ಬಂಧಿತ ಶಿಕ್ಷಕಿಯರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು, ಬೇವೂರು ಜೈಲಿಗೆ ರವಾನಿಸಲಾಗಿದೆ
ಐದರ ಹರೆಯದ ಎಲ್‌ಕೆಜಿ ವಿದ್ಯಾರ್ಥಿನಿಯ ಹೆತ್ತವರ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಆರೋಪಿ ಶಿಕ್ಷಕಿಯರ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾ ಗಿದೆ.
ಇಬ್ಬರು ಶಿಕ್ಷಕಿಯರು ಕೆಲವು ದಿನಗಳಿಂದ ತನ್ನನ್ನು ಬಾತ್‌ರೂಮ್ ಬಳಿಯ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಬಾಲಕಿ ತಾಯಿಯ ಬಳಿ ತನ್ನ ಸಂಕಟ ತೋಡಿಕೊಂಡಾಗ ಈ ಹೇಯ ಕೃತ್ಯ ಬೆಳಕಿಗೆ ಬಂದಿತ್ತು. ತಾವು ಈ ಬಗ್ಗೆ ಶಾಲೆಯ ಪ್ರಾಂಶುಪಾಲರಲ್ಲಿ ದೂರಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೆತ್ತವರು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.