ನಂದಿಕೂರು ಕೈಗಾರಿಕಾ ಕ್ಷೇತ್ರ ಅಭಿವೃದ್ಧಿ ಸಮಸ್ಯೆ ಬಗ್ಗೆ ವರದಿ ಸಲ್ಲಿಕೆ: ಉಡುಪಿ ಡಿಸಿ
ನಂದಿಕೂರು, ನ.5: ಜಿಲ್ಲೆಯ ಉಡುಪಿ ತಾಲೂಕಿನ ನಂದಿಕೂರು ಗ್ರಾಮದಲ್ಲಿ 35.06 ಹೆಕ್ಟೇರ್ (86.64 ಎಕರೆ) ಕೈಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಕುರಿತಂತೆ ಗ್ರಾಮಸ್ಥರು, ಆಸುಪಾಸಿನ ಗ್ರಾಮಗಳ ನಾಗರಿಕರು, ಪರಿಸರ ಆಸಕ್ತ ಗುಂಪುಗಳು ಸಲ್ಲಿಸುವ ಎಲ್ಲಾ ಸಲಹೆ, ಟೀಕೆ ಹಾಗೂ ಅಹವಾಲು ಗಳನು ಕ್ರೋಢೀಕರಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಶನಿವಾರ ನಂದಿಕೂರಿನ ಆನಂದಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳ ವತಿಯಿಂದ ನಂದಿಕೂರು ಕೈಗಾರಿಕಾ ಕ್ಷೇತ್ರ ಅಭಿವೃದ್ಧಿ ಕುರಿತಂತೆ ನಡೆದ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಂದಿಕೂರು ಪ್ರದೇಶದಲ್ಲಿ 86.64 ಎಕರೆಯಲ್ಲಿ 49 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯಿಂದ ನಿರ್ಮಾಣ ಹಂತದಲ್ಲಿ 300ರಿಂದ 400 ಮಂದಿಗೆ, ಬಳಿಕ ಕೈಗಾರಿಕೆಗಳು ಬಂದ ಬಳಿಕ ಸ್ಥಳೀಯ ಸುಮಾರು 3,000 ದಿಂದ 4,000 ಜನರಿಗೆ ಉದ್ಯೋಗಾವಕಾಶ ದೊರೆಯಲಿದ್ದು, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ಕೆಐಎಡಿಬಿಯ ಅಧಿಕಾರಿಗಳು ಯೋಜನೆಯ ಕುರಿತಂತೆ ತಿಳಿಸಿದರು.
ಈ ಕೈಗಾರಿಕಾ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ, ಮಳೆ ನೀರು ಕೊಯ್ಲು, ಇಂಗು ಗುಂಡಿಗಳ ರಚನೆ, ಘನ ತ್ಯಾಜ್ಯ ವಿಲೇವಾರಿ ಘಟಕಗಳು ಮತ್ತು ಗಿಡಗಳನ್ನು ನೆಡಲಾಗುವುದು. ಪ್ರತಿ 3 ತಿಂಗಳಿಗೊಮ್ಮೆ ಸುತ್ತಮುತ್ತಲಿನ ಪರಿಸರ ಮತ್ತು ನೀರಿನ ಪರೀಕ್ಷೆ ನಡೆಸಲಾಗುವುದು. ಸ್ಥಳೀಯರಿಗೆ ನಿಯಮಿತ ಆರೋಗ್ಯ ಪರೀಕ್ಷೆ ಸೇರಿದಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಒಟ್ಟು ವಿಸ್ತೀರ್ಣದ ಶೇ.55 ಕೈಗಾರಿಕೆಗಳಿಗೆ, ಶೇ.19.70 ಉದ್ಯಾನವನ, ಶೇ.5 ವಾಹನ ನಿಲುಗಡೆ ಪ್ರದೇಶ, ಶೇ.14.50 ರಸ್ತೆಗಳ ನಿರ್ಮಾಣ ಮತ್ತು ಇತರೆ ಸೌಲ್ಯಕ್ಕಾಗಿ ಶೇ.5.75 ಜಾಗವನ್ನು ಮೀಸಲಿಡ ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಪ್ರದೇಶದಲ್ಲಿ ಕೇವಲ ಗ್ರೀನ್ ಮತ್ತು ಆರೆಂಜ್ ವಲಯದ ಉದ್ದಿಮೆಗಳಿಗೆ ಮಾತ್ರ ಅವಕಾಶ ಸಿಗಲಿದೆ ಎಂದು ಈ ಅಧಿಕಾರಿ ಮಾಹಿತಿ ನೀಡಿದರು. ಈ ಹಂತದಲ್ಲಿ ಮಧ್ಯಪ್ರದೇಶಿಸಿದ ಪಲಿಮಾರು ಗ್ರಾಪಂ ಅಧ್ಯಕ್ಷರಾದ ಜೀತೇಂದ್ರ ಪುಟಾರ್ಡೊ ಅವರು ಈ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಹಾನಿಕಾರಕ ಉದ್ದಿಮೆಗಳು ಪ್ರಾರಂಗೊಂಡಿವೆ ಎಂದು ಮಾಹಿತಿ ನೀಡಿದರಲ್ಲದೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನೇ ತರಾಟೆಗೆ ತೆಗೆದುಕೊಂಡರು. ಆಗ ಜಿಲ್ಲಾಡಳಿತ ಹಾಗೂ ಇಲಾಖೆಗಳ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶಗೊಂಡ ಸ್ಥಳೀಯರು ಇಡೀ ಸಭೆಯನ್ನೇ ಬಹಿಷ್ಕರಿಸಿ ನಡೆದರು.
ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿಗಳಾದ ರಾಜಶೇಖರ ಪುರಾಣಿಕ್, ಲಕ್ಷೀಕಾಂತ್, ಕೆಐಎಡಿಬಿಯ ಇಂಜಿನಿಯರ್ ಕೆ.ಎಂ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.