×
Ad

ಯುಪಿಸಿಎಲ್ ವಿದ್ಯುತ್‌ನಲ್ಲಿ ಜಿಲ್ಲೆಗೆ ಆದ್ಯತೆ ನೀಡದಿದ್ದಲ್ಲಿ ವಿಸ್ತರಣೆಗೆ ವಿರೋಧ: ಸಚಿವ ಪ್ರಮೋದ್

Update: 2016-11-05 20:52 IST

ಉಡುಪಿ, ನ.5: ವಿದ್ಯುತ್ ಸರಬರಾಜು ಮಾಡುವಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಆದ್ಯತೆ ನೀಡದಿದ್ದಲ್ಲಿ ಮುಂದೆ ಯುಪಿಸಿಎಲ್ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀ ಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಸ್ತುತ ಉಡುಪಿ ತಾಲೂಕಿಗೆ 24ಗಂಟೆಗಳ ವಿದ್ಯುತ್ ನೀಡಲಾಗುತ್ತಿದ್ದು, ಸದ್ಯಕ್ಕೆ ತಾಂತ್ರಿಕ ಕಾರಣದಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ. ಯುಪಿಸಿಎಲ್‌ನಲ್ಲಿ ಉತ್ಪಾದಿಸುವ ವಿದ್ಯುತ್‌ನಲ್ಲಿ ಉಡುಪಿ ಜಿಲ್ಲೆಯನ್ನು ಕಡೆಗಣಿಸಿ ಇತರ ಜಿಲ್ಲೆಗೆ ಆದ್ಯತೆ ನೀಡಿದರೆ ಯೋಜನೆಯನ್ನು ವಿಸ್ತರಿಸುವ ಪ್ರಸ್ತಾಪವನ್ನು ವಿರೋಧಿಸಲಾಗುವುದು ಎಂದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 64ಸಾವಿರ ಹಾಗೂ ಉಡುಪಿ ಕ್ಷೇತ್ರದಲ್ಲಿ 12ಸಾವಿರ ಮಂದಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ತಂದೆ, ಅಜ್ಜನ ಹೆಸರಿನಲ್ಲಿ ದಾಖಲೆ ಇರುವ ಎಸ್‌ಸಿ-ಎಸ್‌ಟಿ ಕುಟುಂಬ ಗಳಿಗೂ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

320 ಫಲಾನುಭವಿಗಳಿಗೆ ಪಿಂಚಣಿ ಯೋಜನೆಗಳ ಮಂಜೂರಾತಿ ಪತ್ರ, 94ಸಿ ಯಡಿ 14 ಜನರಿಗೆ ಹಕ್ಕುಪತ್ರ, 11ಮೀನುಗಾರರಿಗೆ ಸಾಧ್ಯತಾ ಪತ್ರ, ಒಬ್ಬ ಮೀನುಗಾರರಿಗೆ ಸಂಕಷ್ಟ ಪರಿಹಾರ ಯೋಜನೆಯಡಿ ಎರಡು ಲಕ್ಷ ರೂ. ಸಹಾಯಧನ, ಉಡುಪಿ ನಗರಸಭೆಯಿಂದ ದೀನದಯಾಳ್ ಅಂತ್ಯೋ ದಯ ಯೋಜನೆಯಡಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ದಲ್ಲಿ 50 ಫಲಾನುಭವಿಗಳಿಗೆ ವಾಹನ ಚಾಲನಾ ಪರವಾನಿಗೆ, ವಿದ್ಯಾಂಗ ಇಲಾಖೆಯಿಂದ ಎಂಟು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, 50 ಮಂದಿಗೆ ಭಾಗ್ಯಲಕ್ಷ್ಮೀ ಬಾಂಡ್, ಒಂದು ಟ್ಯಾಕ್ಟರ್, ಎಂಟು ಪವರ್ ಟಿಲ್ಲರ್‌ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

42 ಅರ್ಜಿ ಸ್ವೀಕಾರ

ಜನಸ್ಪಂದನದಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಸುಮಾರು 42 ಅರ್ಜಿಗಳನ್ನು ಸ್ವೀಕರಿಸಿದ ಸಚಿವ ಪ್ರಮೋದ್ ಮಧ್ವರಾಜ್, ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲು ಸೂಚನೆ ನೀಡಿದರು. ಸ್ವೀಕೃತಗೊಂಡ ಹೆಚ್ಚಿನ ಅರ್ಜಿಗಳಲ್ಲಿ ರಸ್ತೆ ಮತ್ತು ಮೂಲಭೂತ ಸೌಕರ್ಯ ಕೋರಿ, ಪೊಲೀಸ್ ಇಲಾಖೆಯಲ್ಲಿ ಅನುಕಂಪ ಆಧಾರಿತ ಕೆಲಸ ಕೊಡಿಸಲು, ಮತ್ಸ್ಯಾಶ್ರಯ ಯೋಜನೆಯಡಿ ಮನೆ ನೀಡಲು, ವಿಕಲಚೇತನರಿಗೆ ಸೌಲಭ್ಯ ಒದಗಿಸಲು ಮನವಿ ಮಾಡಲಾಗಿತ್ತು.

ಸಭೆಗೆ ಗೈರುಹಾಜರಾದ ಬಂದರು ಮತ್ತು ಒಳನಾಡು ಜಲಸಾರಿಗೆ, ಮೀನುಗಾರಿಕೆ ಅಧಿಕಾರಿ ಹಾಗೂ ಸಾಲಿಗ್ರಾಮ ಮುಖ್ಯಾಧಿಕಾರಿಗೆ ನೋಟೀಸು ನೀಡುವಂತೆ ಸಚಿವರು ಅಪರ ಜಿಲ್ಲಾಧಿಕಾರಿಯವರಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಸದಸ್ಯ ಜನಾದರ್ನ ತೋನ್ಸೆ, ಕುಂದಾಪುರ ಸಹಾಯಕ ವಿಭಾಗಾಧಿಕಾರಿ ಅಶ್ವಥಿ, ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ್, ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ಪೌರಾಯುಕ್ತ ಮಂಜು ನಾಥಯ್ಯ ವಂದಿಸಿದರು. ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹೈನುಗಾರಿಕೆ ಪ್ರೋತ್ಸಾಹಧನ ಬಿಡುಗಡೆ

ಉಡುಪಿ ಜಿಲ್ಲೆಯ 31080 ಮಂದಿ ಹೈನುಗಾರರಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಬಾಕಿ ಇರಿಸಲಾಗಿದ್ದ ಒಟ್ಟು 8.84ಕೋಟಿ ರೂ. ಪ್ರೋತ್ಸಾಹ ಧನ(ಒಂದು ಲೀಟರ್ ಹಾಲಿಗೆ 4 ರೂ.)ವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಉಡುಪಿ ತಾಲೂಕಿನ 13,205 ಮಂದಿಗೆ 3.42ಕೋಟಿ ರೂ., ಕುಂದಾ ಪುರ ತಾಲೂಕಿನ 12,004 ಮಂದಿಗೆ 3.53ಕೋಟಿ ರೂ., ಕಾರ್ಕಳ ತಾಲೂಕಿನ 5801 ಮಂದಿಗೆ 1.88ಕೋಟಿ ರೂ. ಪ್ರೋತ್ಸಾಹಧನವನ್ನು ನೇರ ವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News