×
Ad

ಒಆರ್‌ಒಪಿ ಯೋಜನೆ ಯುಪಿಎ ಸರಕಾರದ ಕಲ್ಪನೆಯ ಕೂಸು : ಚಿದಂಬರಂ

Update: 2016-11-05 21:05 IST

 ಚೆನ್ನೈ, ನ.5: ಸಮಾನ ಶ್ರೇಣಿ ಸಮಾನ ಪಿಂಚಣಿ (ಒಆರ್‌ಒಪಿ) ಯೋಜನೆಯ ನ್ನು ಘೋಷಿಸಿದ್ದು ಯುಪಿಎ ಸರಕಾರ. ನಾವು ಘೋಷಿಸಿದ್ದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಒಪ್ಪಿಕೊಂಡಿರುವುದನ್ನು ಅನುಷ್ಠಾನಗೊಳಿಸಬೇಕು. ಇದಕ್ಕೆ ವಿರುದ್ಧವಾಗಿ ನಡೆದರೆ ಸಮಸ್ಯೆ ಹುಟ್ಟಿಕೊಳ್ಳುತ್ತದೆ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಯುಪಿಎ ಆಡಳಿತಾವಧಿಯಲ್ಲಿ (2004- 2014) ಪಿಂಚಣಿಯನ್ನು ಮೂರು ಬಾರಿ ಪರಿಷ್ಕರಿಸಲಾಗಿದೆ. 2014ರ ಮಧ್ಯಂತರ ಬಜೆಟ್‌ನಲ್ಲಿ ಒಆರ್‌ಒಪಿ ಯೋಜನೆಯ ಬಗ್ಗೆ ಪ್ರಸ್ತಾವಿಸಲಾಗಿದೆ. ತಾನು ಸಂಸತ್ತಿನಲ್ಲಿ ಇದನ್ನು ಘೋಷಿಸಿದ ಹತ್ತು ದಿನದ ಬಳಿಕ ರಕ್ಷಣಾ ಸಚಿವಾಲಯವು ಈ ಬಗ್ಗೆ ಮೂರು ಪ್ರಮುಖ ಅಂಶಗಳನ್ನೊಳಗೊಂಡ ಒಂದು ಕಾರ್ಯನೀತಿಯನ್ನು ಪ್ರಕಟಿಸಿತ್ತು. ಸಮಾನ ಶ್ರೇಣಿ ಮತ್ತು ಸಮಾನ ಸೇವಾವಧಿಗೆ ಸಮಾನ ಪಿಂಚಣಿಯ ಬಗ್ಗೆ ಕಾರ್ಯನೀತಿಯಲ್ಲಿ ವಿವರಿಸಲಾಗಿತ್ತು. ಪ್ರತೀ ಬಾರಿ ಪಿಂಚಣಿಯನ್ನು ಪರಿಷ್ಕರಿಸಿದಾಗ ಅದು ಎಲ್ಲರಿಗೂ ಅನ್ವಯವಾಗುವಂತಿರಬೇಕು. ಸ್ವಯಂ ನಿವೃತ್ತಿ ಪಡೆದವರಿಗೂ ಒಆರ್‌ಒಪಿ ಅನ್ವಯವಾಗಬೇಕು ಎಂದು ಅದರಲ್ಲಿ ತಿಳಿಸಲಾಗಿತ್ತು ಎಂದು ಚಿದಂಬರಂ ತಿಳಿಸಿದರು. ಯುಪಿಎ ಆಡಳಿತದಲ್ಲಿ ಒಆರ್‌ಒಪಿ ಎಂಬ ವಿಷಯದ ಬಗ್ಗೆ ವರದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ಸರಕಾರಕ್ಕೆ ಯೋಜನೆಯನ್ನು ಬದಲಿಸುವ ಅಧಿಕಾರವಿದೆ. ಆದರೂ ಅನುಷ್ಠಾನಗೊಳಿಸಲಾಗಿದೆ ಎಂದು ಸುಳ್ಳು ಹೇಳುವುದು ಸರಿಯಲ್ಲ. ಒಆರ್‌ಒಪಿ ಜಾರಿಗಾಗಿ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವರಿಗೇನು ತಲೆ ಕಟ್ಟಿದೆಯೇ ಎಂದು ಚಿದಂಬರಂ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News